ಆರೋಗ್ಯ ಕೇಂದ್ರಕ್ಕೆ ಶಾಸಕ ಕಂದಕೂರು ದಿಢೀರ್ ಭೇಟಿ

| Published : Mar 07 2024, 01:51 AM IST

ಆರೋಗ್ಯ ಕೇಂದ್ರಕ್ಕೆ ಶಾಸಕ ಕಂದಕೂರು ದಿಢೀರ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗುರುಮಠಕಲ್ ಸಮೀಪದ ಅರಿಕೇರಾ (ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಸಮೀಪದ ಅರಿಕೇರಾ (ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಬುಧವಾರ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಅವ್ಯವಸ್ಥೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ರೋಗಿಗಳ ಜೊತೆ ಮಾತನಾಡಿದ ಶಾಸಕರು, ಅಲ್ಲಿನ ಅವ್ಯವಸ್ಥೆ, ಸಿಬ್ಬಂದಿ ನಿರ್ಲಕ್ಷ್ಯತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ಔಷಧಿಗಳಿಲ್ಲದೆ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತೀರಿ, ಆಸ್ಪತ್ರೆ ದನದ ಕೊಟ್ಟಿಗೆಯಾಗಿದೆ. ಶಾಸಕನಾಗಿ ನಾನು ಆಗಮಿಸುತ್ತಿದ್ದೇನೆ ಎಂದು ನೀವು ಆಸ್ಪತ್ರೆಗೆ ಆಗಮಿಸಿದ್ದೀರಾ ಎಂದು ಪ್ರಶ್ನಿಸಿದ ಶಾಸಕರು, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನಿಮ್ಮ ಮನೆಗೆ ಹೋಗಿ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್ ಪಾಟೀಲ್ ವಿರುದ್ಧ ಆಕ್ರೋಶಗೊಂಡರು.

ನರ್ಸ್, ಸಿಬ್ಬಂದಿಯನ್ನು ಕರೆದು ಮಾತನಾಡಿಸಿದ ಅವರು, ಹೇಗೆ ಚಿಕಿತ್ಸೆ ನೀಡುತ್ತೀರಿ? ರೋಗಿಗಳಿಗೆ ಗ್ಲೂಕೋಸ್ ಡ್ರಿಪ್ ಹಚ್ಚುವ ಪದ್ಧತಿ ಹೀಗೇನಾ? ಎಂದು ಪ್ರಶ್ನಿಸಿದಾಗ, ಸಿಬ್ಬಂದಿ ಯಾವುದೇ ಮಾತನಾಡದೆ ಮೌನಕ್ಕೆ ಶರಣಾದರು.

ಈ ವೇಳೆ ಗ್ರಾಮದ ಪ್ರಮುಖರು ಮಾತನಾಡಿ,‌ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಯಲ್ಲಿ ಇರುವುದಿಲ್ಲ, ಚಿಕಿತ್ಸೆ ದೂರದ ಮಾತು ಎಂದು ತಮ್ಮ ಅಳಲನ್ನು ಶಾಸಕರ ಎದುರಿಗೆ ತೋಡಿಕೊಂಡರು.

ಶಾಸಕರು ಸಿಬ್ಬಂದಿಯ ಹಾಜರಿ ಪುಸ್ತಕ, ಔಷಧಿ ಕೋಣೆ ವೀಕ್ಷಿಸಿದರು. ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಕುಮಾರ್, ನಿರ್ಮಿತಿ ಕೇಂದ್ರದ ಕಿರಣ್ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಸಮ್ಮ, ಉಪಾಧ್ಯಕ್ಷ ಅನುಷಾ, ಸದಸ್ಯರಾದ ಹಣಮಂತ, ಯಸುಮಿತ್ರ, ಪ್ರಭುಗೌಡ, ಶಾಂತಪ್ಪ ಇತರರಿದ್ದರು.