ಹಾವೇರಿ ನಗರದ ಕೆರಿಮತ್ತಿಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅನಿರೀಕ್ಷಿತವಾಗಿ ಭೇಟಿ ನೀಡಿ ಕಾಲೇಜಿನಲ್ಲಿ ಅವ್ಯವಸ್ಥೆ ಕಂಡು ಸಿಬ್ಬಂದಿ ವಿರುದ್ಧ ಗರಂ ಆದರು.
ಹಾವೇರಿ: ನಗರದ ಕೆರಿಮತ್ತಿಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅನಿರೀಕ್ಷಿತವಾಗಿ ಭೇಟಿ ನೀಡಿ ಕಾಲೇಜಿನಲ್ಲಿ ಅವ್ಯವಸ್ಥೆ ಕಂಡು ಸಿಬ್ಬಂದಿ ವಿರುದ್ಧ ಗರಂ ಆದರು.
ಕಾಲೇಜಿನ ಎಲ್ಲ ಕೊಠಡಿಗಳು, ಶೌಚಾಲಯ ಹಾಗೂ ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸುತ್ತ ಚರಂಡಿ ನೀರು ನಿಂತಿರುವುದನ್ನು ವೀಕ್ಷಿಸಿದರು. ತಂಬಾಕು, ಗುಟಕಾ, ಪಾನಮಸಾಲ್ ಚೀಟ್‌ಗಳು, ಸಿಗರೆಟ್ ಪ್ಯಾಕ್‌ಗಳು ಇತ್ಯಾದಿ ಅವ್ಯವಸ್ಥೆ ಕಂಡು ಗರಂ ಆದ ಅವರು, ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಅನುದಾನ ವ್ಯಯ ಮಾಡುತ್ತದೆ. ಕಾಲೇಜಿಗೆ ಬರುವ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ಕಾಲೇಜುಗಳನ್ನು ಆರಂಭಿಸಲಾಗಿದ್ದು, ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಬೇಜವಾಬ್ದಾರಿಯಿಂದ ಕಾಲೇಜು ಈ ರೀತಿ ಗಬ್ಬು ನಾರುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾಲೇಜಿನ ದಾಖಲೆಗಳನ್ನು ಉಪಸಭಾಧ್ಯಕ್ಷರು ಪರಿಶೀಲಿಸಿದರು. ಭೇಟಿಯ ಸಂದರ್ಭದಲ್ಲಿ ಪ್ರಾಂಶುಪಾಲರು ಕಾಲೇಜಿನಲ್ಲಿ ಇರದೇ ಅನ್ಯ ಕಾರ್ಯ ನಿಮಿತ್ತ ತೆರಳಿರುವುದಾಗಿ ತಿಳಿಸಿದ್ದು, ಯಾವ ಕಾರಣದ ಮೇಲೆ ಬೇರೆ ಕಡೆ ಹೋಗಿದ್ದರು ಎಂಬ ಬಗ್ಗೆ ಯಾವುದೇ ದಾಖಲಾತಿಗಳನ್ನು ಸಹ ನಿರ್ವಹಣೆ ಮಾಡಿಲ್ಲ ಎಂದು ಆಕ್ರೋಶಗೊಂಡರು.ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ ಸಂತೋಷಕುಮಾರ ಕದಂ ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ದಾಖಲೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ತಡಬಡಾಯಿಸಿದರು.
ತಕ್ಷಣವೇ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರಿಗೆ ದೂರವಾಣಿ ಕರೆ ಮಾಡಿದ ಅವರು, ಐಟಿಐ ಕಾಲೇಜಿನಲ್ಲಿರುವ ಪ್ರಾಚಾರ್ಯ ರಾಮಚಂದ್ರ ಬಿರಾದಾರ ಹಾಗೂ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಸಂತೋಷಕುಮಾರ ಕದಂ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸಲು ಅಸಡ್ಡೆ, ಬೇಜವಾಬ್ದಾರಿತನ ತೋರಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರು ಹಾಜರಿದ್ದರು.