ಸಾರಾಂಶ
ಕಡೂರು, ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಹುಡುಕದೆ ಕೈ ಬಿಡಲಾಗಿರುವ ಪ್ರಕರಣ ಎಂದು ಷರಾ ಬರೆಯುವುದಾದರೆ ನಾವು ಏತಕ್ಕಿದ್ದೀವಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ತರಾಟೆಗೆ ತೆಗೆದುಕೊಂಡರು.
- ಕಡೂರು ತಾಲೂಕು ಪಂಚಾಯ್ತಿಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಹುಡುಕದೆ ಕೈ ಬಿಡಲಾಗಿರುವ ಪ್ರಕರಣ ಎಂದು ಷರಾ ಬರೆಯುವುದಾದರೆ ನಾವು ಏತಕ್ಕಿದ್ದೀವಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ತರಾಟೆಗೆ ತೆಗೆದುಕೊಂಡರು.
ಕಡೂರಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂದಾಯ ಗ್ರಾಮ ಮತ್ತು ಉಪಗ್ರಾಮಗಳ ರಚನೆಗೆ ಸಣ್ಣ ಪುಟ್ಟ ಕಾರಣ ನೀಡಿ ಪ್ರಸ್ತಾವನೆಯಿಂದ ಕೈ ಬಿಡಲಾಗಿದೆ ಎಂದು ನಮೂದಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಕಂದಾಯ ಗ್ರಾಮವನ್ನಾಗಿ ಮಾಡುವ ಪ್ರಸ್ತಾವನೆ ಕೈ ಬಿಡಲಾಗಿದೆ ಎಂದರೆ ಅರ್ಥವೇನು? ಕಂದಾಯ ಗ್ರಾಮವಾದರೆ ಕೆಲಸ ಹೆಚ್ಚಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೀಗೆ ಮಾಡುತ್ತಾರೆ. ಅರ್ಹತೆ ಯಿದ್ದೂ ಸುಳ್ಳು ಮಾಹಿತಿ ನೀಡಿದರೆ ಆಯಾ ಅಧಿಕಾರಿಗಳೇ ಅದಕ್ಕೆ ಹೊಣೆಯಾಗುತ್ತಾರೆ. ಸಂಬಂಧಿಸಿದ ಸಚಿವರು ಬಂದು ಸ್ಥಳ ಪರಿಶೀಲನೆ ಮಾಡಿದರೆ ಆಗ ಏನು ಉತ್ತರಿಸುತ್ತೀರಿ? ಯಾವ ಆಧಾರದ ಮೇಲೆ ಕೈ ಬಿಡಲಾಗಿದೆ ಎಂದು ವರದಿ ನೀಡಿದ್ದೀರಿ ಎಂದು ತಹಸೀಲ್ದಾರ್ ಮತ್ತು ಕೆಲ ಕಂದಾಯ ಅಧಿಕಾರಿಗಳ ಮೇಲೆ ಹರಿಹಾಯ್ದರು.ಕೂಡಲೇ ಹೊಸ ಕಂದಾಯ ಮತ್ತು ಉಪಗ್ರಾಮಗಳ ಪ್ರಸ್ತಾವನೆಯ ಪರಿಷ್ಕೃತ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಹಸೀಲ್ದಾರರಿಗೆ ಸೂಚಿಸಿದ ಶಾಸಕರು ಕೆಲಸ ಹೆಚ್ಚಾಗುತ್ತದೆ ಎಂದು ಪ್ರಸ್ತಾವನೆಯನ್ನೆ ಕೈ ಬಿಟ್ಟರೆ ತಾವು ಸಹಿಸು ವುದಿಲ್ಲ ಎಂದು ಎಚ್ಚರಿಸಿದರು. ತಾಲೂಕು ಈ ಬಾರಿ ಎಸ್ಎಸ್ಎಲ್ ಸಿ. ಪರೀಕ್ಷೆಯಲ್ಲಿ 6ನೇ ಸ್ಥಾನ ಪಡೆದಿದೆ. ಶಿಕ್ಷಣದ ಗಣಮಟ್ಟ ಕುಸಿಯುತ್ತಿದೆ ಎಂಬ ಆತಂಕ ನನ್ನದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶದ ಪ್ರಮಾಣ ಹೆಚ್ಚಾಗಬೇಕು. ಶಿಕ್ಷಕರಿಗೆ ಎಲ್ಲಿ ವ್ಯತ್ಯಾಸ ವಾಗಿದೆ ಎಂದು ತಿಳಿದು ಫಲಿತಾಂಶ ಉತ್ತಮವಾಗಿಸಲು ಕ್ರಮ ವಹಿಸಬೇಕು. ಈ ಕುರಿತು ಸಂಪೂರ್ಣ ಗಮನ ಹರಿಸಬೇಕು ಎಂದು ಬಿಇಓ ಸಿದ್ದರಾಜು ನಾಯ್ಕ ಅವರಿಗೆ ಸೂಚಿಸಿದರು. ಪರೀಕ್ಷೆಗೊಳಪಟ್ಟ 322 ಜನರಲ್ಲಿ 34 ಮಂದಿಗೆ ಡೆಂಘೀ ಧೃಢಪಟ್ಟಿದ್ದು, ಪ್ರತಿಯೊಬ್ಬರೂ ಗುಣಮುಖರಾಗಿದ್ದಾರೆ. ಡೆಂಘೀ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ತಾಲೂಕು ಆರೋಗ್ಯಾದಿಕಾರಿ ಡಾ.ರವಿಕುಮಾರ್ ತಿಳಿಸಿದರು.ಮೇ ತಿಂಗಳಲ್ಲಿ ಶೇ 40 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಜೂನ್ ತಿಂಗಳ ವಾಡಿಕೆ ಮಳೆ ಶೇ 11 ರಷ್ಟು ಕಡಿಮೆಯಾಗಿದೆ. ರಾಗಿ ಬಿತ್ತನೆ ಈಗ ಆರಂಭವಾಗಬೇಕಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಮಾಹಿತಿ ನೀಡಿದರು.4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿ ಮೊಳಕೆ ಹಂತದಲ್ಲಿದೆ. ಈಗ ಮಳೆ ಬಾರದಿದ್ದರೆ ಬೆಳೆ ನಷ್ಟವಾಗುವ ಸಂಭವವಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಯದೇವ್ ಮಾಹಿತಿ ನೀಡಿದರು. ಆಲೂಗೆಡ್ಡೆ, ಈರುಳ್ಳಿ ಮುಂತಾದ ವಾಣಿಜ್ಯ ಬೆಳೆಗಳಿಗೆ ವಿಮೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಮತ್ತು ಕೃಷಿ ಸಲಕರಣೆಗಳನ್ನು ಅರ್ಹರಿಗೆ ನೀಡಬೇಕು ಎಂದು ಶಾಸಕರು ಸೂಚಿಸಿದರು.ಇನ್ನುಳಿದಂತೆ ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ, ಮೀನುಗಾರಿಕೆ, ಪೊಲೀಸ್,ಮೆಸ್ಕಾಂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.ತರೀಕೆರೆ ಉಪ ವಿಭಾಗಾದಿಕಾರಿ ಡಾ.ಕಾಂತರಾಜ್, ತಹಸೀಲ್ದಾರ್ ಮಂಜುನಾಥ್, ಇಓ ಪ್ರವೀಣ್ ಇದ್ದರು.