ಚಿಕ್ಕಬಾಣಾವರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮುನಿರಾಜು ಚಾಲನೆ

| Published : Mar 15 2024, 01:17 AM IST / Updated: Mar 15 2024, 01:13 PM IST

ಸಾರಾಂಶ

ಚಿಕ್ಕಬಾಣಾವರ ಕೆರೆ ಅಭಿವೃದ್ಧಿಗಾಗಿ ಪುರಸಭೆ ಅನುದಾನದ ಅಡಿಯಲ್ಲಿ ಪ್ರಾಥಮಿಕವಾಗಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಮುನಿರಾಜು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಚಿಕ್ಕಬಾಣಾವರ ಕೆರೆಯ ಒತ್ತುವರಿ ಜಾಗವನ್ನು ನಿರ್ಧಾಕ್ಷಿಣ್ಯವಾಗಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಹಂತದಲ್ಲಿ ₹2 ಕೋಟಿ ವೆಚ್ಚದಲ್ಲಿ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

ಚಿಕ್ಕಬಾಣಾವರ ಕೆರೆ ಅಭಿವೃದ್ಧಿಗಾಗಿ ಪುರಸಭೆ ಅನುದಾನದ ಅಡಿಯಲ್ಲಿ ಪ್ರಾಥಮಿಕವಾಗಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು.

ಬಿಡಿಎಯಿಂದಲೂ ಕೂಡ ಸುಮಾರು ₹12.60 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗುತ್ತದೆ. ಪ್ರತಿನಿತ್ಯ ಸಾವಿರಾರು ಜನರು ವಾಯುಹಾರಕ್ಕೆ ಅನುಕೂಲವಾಗುವಂತೆ ಕೆರೆಯ ಸುತ್ತಲೂ ವಾಕಿಂಗ್ ಪಾತ್ ನಿರ್ಮಾಣ, ಕೆರೆಯ ಹೂಳು ತೆಗೆಸಿ ಕೆರೆಯಲ್ಲಿರುವ ನೀರನ್ನು ಶುದ್ಧಗೊಳಿಸಲಾಗುತ್ತದೆ. ಕೆರೆಗೆ ಕೊಳಚೆ ನೀರು ಹೋಗದಂತೆ ತಡೆಯಲಾಗುತ್ತದೆ ಎಂದರು.

ಚಿಕ್ಕಬಾಣಾವರ ಕೆರೆ ಅಭಿವೃದ್ಧಿ ಆಗಬೇಕೆಂಬುದು ಗ್ರಾಮಸ್ಥರ ಬಹುದಿನದ ಕನಸಾಗಿತ್ತು. ಸ್ಥಳೀಯರ ಹೋರಾಟ ಕೂಡ ಆಗಿತ್ತು. 105 ಎಕರೆ ವಿಸ್ತೀರ್ಣವುಳ್ಳ ಬಹುದೊಡ್ಡ ಕೆರೆ ಅನುದಾನವಿಲ್ಲದೆ ಅಭಿವೃದ್ಧಿ ಕಂಡಿರಲಿಲ್ಲ. ಎಲ್ಲರ ಪರಿಶ್ರಮದ ಫಲವಾಗಿ ಇಂದು ಕೆರೆಯ ಅಭಿವೃದ್ಧಿಗೆ ಕಾಲ ಕೂಡಿಬಂದಿದೆ. ಈ ಕೆರೆ ಸುಂದರ ಸ್ವಚ್ಛ ಮತ್ತು ಜನಸ್ನೇಹಿ ಕೆರೆಯನ್ನಾಗಿ ಮಾಡಲಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಪುರಸಭೆ ಮುಖ್ಯ ಅಧಿಕಾರಿ ಎಚ್.ಎ.ಕುಮಾರ್ ಮಾತನಾಡಿ, ಪುರಸಭೆ ಅನುದಾನದಲ್ಲಿ ಐದು ಹಂತಗಳಿಗೆ ಯೋಜನೆ ರೂಪಿಸಿದ್ದು, ಮೊದಲನೇ ಮತ್ತು ಎರಡನೇ ಹಂತದಲ್ಲಿ ಎರಡು ಕೋಟಿ ಮೊತ್ತದ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಎ.ಇ.ಸುಮತಿ, ಪರಿಸರ ಅಭಿಯಂತರ ಹರೀಶ್, ಸ್ಥಳೀಯರಾದ ವೆಂಕಟೇಶ್, ಮಹಮ್ಮದ ಕಬೀರ್ ಅಹಮ್ಮದ್, ಬಿ.ಎಂ.ಚಿಕ್ಕಣ್ಣ, ಭಾಗ್ಯಮ್ಮ, ಗೀರೀಶ್ ಕುಮಾರ್, ನವೀನ್, ದಿಲೀಪ್ ಸಿಂಹ, ಅಭಿಲಾಶ್ ಮರಿಸ್ವಾಮಿ ಮುಂತಾದವರು.