ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಗೆ ಶಾಸಕ ನರೇಂದ್ರಸ್ವಾಮಿ ಕಿಡಿ

| Published : Oct 27 2024, 02:20 AM IST

ಸಾರಾಂಶ

ರಸ್ತೆ ಸಮೀಪವೇ ಒಳಚರಂಡಿ ಮ್ಯಾನ್‌ಹೋಲ್, ಕುಡಿಯುವ ನೀರಿನ ಪೈಪ್‌ಗಳು ಹೋಗಿದ್ದರೂ ಚರಂಡಿ ನಿರ್ಮಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮ್ಯಾನ್‌ಹೋಲ್ ಹಾಗೂ ಕುಡಿಯುವ ನೀರಿನ ಪೈಪ್‌ಗಳು ಡ್ಯಾಮೇಜ್ ಆಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಕನಕಪುರ- ಮಳವಳ್ಳಿ ರಾಷ್ಟ್ರೀಯ ಹೆದ್ದಾರಿ- ೨೦೯ರಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿದ್ದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗೆ ಚಾಟಿ ಬೀಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕುಡಿಯುವ ನೀರು, ಒಳಚರಂಡಿ ಪೈಪ್‌ಗಳನ್ನು ಸ್ಥಳಾಂತರ ಮಾಡುವವರೆಗೂ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು.

ರಸ್ತೆ ಸಮೀಪವೇ ಒಳಚರಂಡಿ ಮ್ಯಾನ್‌ಹೋಲ್, ಕುಡಿಯುವ ನೀರಿನ ಪೈಪ್‌ಗಳು ಹೋಗಿದ್ದರೂ ಚರಂಡಿ ನಿರ್ಮಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮ್ಯಾನ್‌ಹೋಲ್ ಹಾಗೂ ಕುಡಿಯುವ ನೀರಿನ ಪೈಪ್‌ಗಳು ಡ್ಯಾಮೇಜ್ ಆಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ರಸ್ತೆ ಬದಿಯಲ್ಲಿ ನಿರ್ಮಿಸುತ್ತಿರುವ ಚರಂಡಿಯ ಅಡ್ಡಲಾಗಿ ಒಳಚರಂಡಿ ಮ್ಯಾನ್‌ಹೋಲ್, ಕುಡಿಯುವ ಪೈಪ್ ಹಾಗೂ ವಿದ್ಯುತ್ ಕಂಬಗಳು ಬಂದಿವೆ. ಅವುಗಳನ್ನು ತೆರವುಗೊಳಿಸಬೇಕೆಂಬ ಕನಿಷ್ಠ ಜ್ಞಾನವಿಲ್ಲದೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ತರಾಟೆ ತೆಗದುಕೊಂಡರು. ಚರಂಡಿಗೆ ಅಡ್ಡಲಾಗಿ ಮ್ಯಾನ್‌ವೋಲ್ ಬಂದಿದ್ದು, ಮಳೆ ನೀರು ಹೊರಕ್ಕೆ ಹೇಗೆ ಹೋಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಾರ್ವಜನಿಕರಿಗೆ ಅನುಕೂಲಕ್ಕಾಗಿ ರಸ್ತೆ ಮಾಡುತ್ತಿರುವ ನೀವು ಸಾರ್ವಜನಿಕರಿಗೆ ಏಕೆ ತೊಂದರೆ ಕೊಡುತ್ತಿದ್ದೀರಿ ಎಂದು ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಖುದ್ದಾಗಿ ಬಂದು ವೀಕ್ಷಣೆ ಮಾಡಿ ಸ್ಥಳೀಯ ಪುರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ, ಮ್ಯಾನ್‌ಹೋಲ್, ಕುಡಿಯುವ ನೀರು ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವವರೆಗೂ ಕಾಮಗಾರಿಯನ್ನು ಮುಂದುವರಿಸಬಾರದು. ದ್ವೀಪದ ರಸ್ತೆ ನಿರ್ಮಿಸಲು ಮೊದಲ ಆದ್ಯತೆ ನೀಡುವಂತೆ ತಿಳಿಸಿದರು.

ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ಬಂದ ಸಂದರ್ಭದಲ್ಲಿ ರಸ್ತೆ ನೀರು ಮನೆಗಳಿಗೆ ನುಗ್ಗುತ್ತಿದೆ, ಕೆಲವು ಕಡೆಗಳಲ್ಲಿ ಒಳಚರಂಡಿ ಪೈಪ್‌ಗಳು ಒಡೆದುಹೋಗಿವೆ, ಸಾರ್ವಜನಿಕರು ಪ್ರಶ್ನೆ ಮಾಡಿದರೆ ಇಲ್ಲಿನ ಇಂಜಿನಿಯರ್‌ಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆಂದು ಸಾರ್ವಜನಿಕರು ಶಾಸಕರಿಗೆ ದೂರು ನೀಡಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಮುಖ್ಯಾಧಿಕಾರಿ ನಾಗರತ್ನಮ್ಮ, ಸದಸ್ಯ ಶಿವಸ್ವಾಮಿ, ಮುಖಂಡರಾದ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಜಿಪಂ ಮಾಜಿ ಸದಸ್ಯ ವಿಶ್ವಾಸ್, ಚೇತನ್ ನಾಯಕ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.