ಮಳವಳ್ಳಿ ಪುರಸಭೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ, ಅಧಿಕಾರಿಗಳು, ಸಿಬ್ಬಂದಿಗೆ ತರಾಟೆ

| Published : Aug 28 2024, 12:59 AM IST

ಮಳವಳ್ಳಿ ಪುರಸಭೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ, ಅಧಿಕಾರಿಗಳು, ಸಿಬ್ಬಂದಿಗೆ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಕಚೇರಿಯಲ್ಲಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಯಾವುದೇ ನಿರ್ಲಕ್ಷ್ಯ ವಹಿಸಿದರೂ ಸಹಿಸುವುದಿಲ್ಲ. ಇನ್ನು ಮುಂದೆ ಕಾರ್ಯಾಲಯದಲ್ಲಿ ಕಡ್ಡಾಯವಾಗಿ ಇರಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಪುರಸಭೆಗೆ ಭೇಟಿ ನೀಡಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಮಧ್ಯವರ್ತಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಕಚೇರಿ ಹಲವು ವಿಭಾಗಗಳಲ್ಲಿ ಅಧಿಕಾರಿಗಳು ಇಲ್ಲದಿರುವುದನ್ನು ಕಂಡು ಕೆಲಕಾಲ ಸಿಡಿಮಿಡಿಗೊಂಡರು. ಸ್ಥಳದಲ್ಲಿದ್ದ ಸಿಬ್ಬಂದಿ, ಅಧಿಕಾರಿಗಳು ಕಾರ್ಯ ನಿಮಿತ್ತ ವಿವಿಧ ವಾರ್ಡ್ ಗಳಿಗೆ ತೆರಳಿದ್ದಾರೆ. ಎಲ್ಲರನ್ನೂ ಕೂಡಲೇ ಕಚೇರಿಗೆ ಬರುವಂತೆ ತಾಕೀತು ಮಾಡಿದರು.

ಕಂದಾಯ ಇಲಾಖೆ ಕೊಠಡಿಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರೊಬ್ಬರು ಹೊರಬರುತ್ತಿರುವುದನ್ನು ಕಂಡ ಶಾಸಕರು ನೀವು ಯಾಕೆ ಬಂದಿದ್ದೀರಾ..?, ಏನು ಕೆಲಸ ನಿಮಗೆ ಇಲ್ಲಿ ಎಂದು ಪ್ರಶ್ನಿಸಿದರು. ಕಂದಾಯ ಕಟ್ಟಲು ಬಂದಿದ್ದೇನೆ ಎಂದಾಗ ನೀವು ಮಧ್ಯವರ್ತಿನಾ ಎಂದು ಪ್ರಶ್ನಿಸಿ ಕಡತ ಕಿತ್ತುಕೊಂಡು ಕಚೇರಿಯಿಂದ ಹೊರ ಹೋಗುವಂತೆ ಸೂಚಿಸಿದರು.

ನಂತರ ಮತ್ತೊಬ್ಬರು ಪಟ್ಟಣದಲ್ಲಿ ವಾಸವಿಲ್ಲದಿದ್ದರೂ ನೀರಿನ ಕಂದಾಯ ಕಟ್ಟುವಂತೆ ತಿಳಿಸಿದ್ದು, ಕಂದಾಯ ಕಟ್ಟುವಿಕೆಯಿಂದ ವಿನಾಯ್ತಿ ಕೊಡಿಸಿ ಪೌತಿ ಖಾತೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಕಾನೂನು ಬದ್ಧವಾಗಿ ಕಂದಾಯ ಕಟ್ಟಲೇಬೇಕಾಗಿದ್ದು, ಇದರಿಂದ ನನಗೂ ವಿನಾಯ್ತಿ ಇರುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಮನವರಿಕೆ ಮಾಡಿದರು.

ಅಧಿಕಾರಿಗಳು ಕಚೇರಿಯಲ್ಲಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಯಾವುದೇ ನಿರ್ಲಕ್ಷ್ಯ ವಹಿಸಿದರೂ ಸಹಿಸುವುದಿಲ್ಲ. ಇನ್ನು ಮುಂದೆ ಕಾರ್ಯಾಲಯದಲ್ಲಿ ಕಡ್ಡಾಯವಾಗಿ ಇರಬೇಕು ಎಂದು ತಾಕೀತು ಮಾಡಿದರು. ಏನೇ ಸಮಸ್ಯೆ ಇದ್ದರೂ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಅಧಿಕಾರಿಗಳಾದ ನಳಿನಿ ಕುಮಾರಿ, ಭೈರಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.