ರಾಬಕೊವಿ ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ

| Published : Jul 26 2025, 12:30 AM IST

ರಾಬಕೊವಿ ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಉಪಾಧ್ಯಕ್ಷರಾಗಿ ಕಾರಟಗಿಯ ಎನ್. ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣೆಯಿಂದ ದೂರ ಉಳಿದ ಮಾಜಿ ಅಧ್ಯಕ್ಷ ಭೀಮಾನಾಯ್ಕಕನ್ನಡಪ್ರಭ ವಾರ್ತೆ ಬಳ್ಳಾರಿ

ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಉಪಾಧ್ಯಕ್ಷರಾಗಿ ಕಾರಟಗಿಯ ಎನ್. ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಒಕ್ಕೂಟದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರ ಆಯ್ಕೆಯನ್ನು ಚುನಾವಣೆ ಅಧಿಕಾರಿಯೂ ಆದ ಬಳ್ಳಾರಿ ಉಪ ವಿಭಾಗಾಧಿಕಾರಿ ಪ್ರಮೋದ್ ಘೋಷಿಸಿದರು.

ಒಕ್ಕೂಟದ ಮಾಜಿ ಅಧ್ಯಕ್ಷ ಭೀಮಾನಾಯ್ಕ ಮತ್ತೊಮ್ಮೆ ತಾವೇ ಅಧ್ಯಕ್ಷರಾಗಲು ತೆರೆಮರೆಯಲ್ಲಿ ಭಾರೀ ಪೈಪೋಟಿ ನಡೆಸಿದ್ದರು. ಹೀಗಾಗಿ ಚುನಾವಣೆ ಕಣ ತೀವ್ರ ಕುತೂಹಲಕ್ಕೆಡೆ ಮಾಡಿತ್ತು. ಏತನ್ಮಧ್ಯೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಒಕ್ಕೂಟದ ಅಧ್ಯಕ್ಷರಾಗಲು ನಿರ್ಧರಿಸಿ, ಮುಖ್ಯಮಂತ್ರಿಗಳ ಬೆಂಬಲ ಪಡೆದು ಚುನಾವಣೆ ಅಖಾಡಕ್ಕೆ ಎಂಟ್ರಿಯಾದ ಬಳಿಕ ಭೀಮಾನಾಯ್ಕ ಚುನಾವಣೆಯಿಂದ ದೂರ ಉಳಿದರು.

ಒಕ್ಕೂಟದ 12 ನಿರ್ದೇಶಕರ ಸ್ಥಾನಗಳ ಪೈಕಿ ಶಾಸಕ ಹಿಟ್ನಾಳ 7 ಹಾಗೂ ಭೀಮಾನಾಯ್ಕ 5 ಜನ ನಿರ್ದೇಶಕರ ಬಲ ಹೊಂದಿದ್ದರು. ರಾಜ್ಯ ಸರ್ಕಾರ ಹಿಟ್ನಾಳ ಅವರನ್ನು ಕಳೆದ 2 ದಿನಗಳ ಹಿಂದೆಯಷ್ಟೇ ಒಕ್ಕೂಟಕ್ಕೆ ನಾಮ ನಿರ್ದೇಶನ ಮಾಡಿದ್ದರಿಂದ ಹಿಟ್ನಾಳ ಅವರ ಬಲ 8 ಕ್ಕೇರಿತ್ತು. ಹೀಗಾಗಿ ಚುನಾವಣೆಯಲ್ಲಿ ಗೆಲುವು ಹಿಟ್ನಾಳ ಗೆ ಸುಸೂತ್ರವಾಯಿತು. ಚುನಾವಣೆ ಪ್ರಕ್ರಿಯೆ ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲಿಗರು ಹಾಗೂ ಬಳ್ಳಾರಿಯ ಕಾಂಗ್ರೆಸ್ ನೂರಾರು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಮಾಜಿ ಸಂಸದರಾದ ಕರಡಿ ಸಂಗಣ್ಣ, ಬಸವರಾಜ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಬಳ್ಳಾರಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಒಕ್ಕೂಟದ ನಿರ್ದೇಶಕರು ಉಪಸ್ಥಿತರಿದ್ದರು.ಅಸಮಾಧಾನವಿಲ್ಲ -ಭೀಮಾನಾಯ್ಕ

ಚುನಾವಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಭೀಮಾನಾಯ್ಕ, ಅಧಿಕಾರ ಹಂಚಿಕೆಯ ಸೂತ್ರದ ಮೇರೆಗೆ ಶಾಸಕ ಹಿಟ್ನಾಳ ಅವರ ಆಯ್ಕೆಯಾಗಿದ್ದು ನನಗೆ ಯಾವ ಅಸಮಾಧಾನವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಆದ ಅಧಿಕಾರ ಹಂಚಿಕೆ ಸೂತ್ರದಲ್ಲಿ ಕೊಪ್ಪಳ ಜಿಲ್ಲೆಗೆ ಅಧ್ಯಕ್ಷ ಸ್ಥಾನ ಹಾಗೂ ರಾಯಚೂರು ಜಿಲ್ಲೆಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ವಿಜಯನಗರ ಜಿಲ್ಲೆಗೆ ರಾಜ್ಯ ಡೆಲಿಗೇಟ್ (ಪ್ರಾತಿನಿಧ್ಯ) ಸ್ಥಾನ ನೀಡಲಾಗಿದೆ. ಹೈಕಮಾಂಡ್ ಸೂಚನೆಯಂತೆ ಅಧಿಕಾರ ಸೂತ್ರಕ್ಕೆ ಬದ್ಧನಾಗಿದ್ದೇನೆ. ನಾನು ವಿಜಯನಗರ ಜಿಲ್ಲೆಯಿಂದ ರಾಜ್ಯ ಡೆಲಿಗೇಟ್ ಆಗಿ ಹೋಗಲಿದ್ದೇನೆ. ಈಗಲೂ ನಾನು ಕೆಎಂಎಫ್ ಅಧ್ಯಕ್ಷ ಆಕಾಂಕ್ಷಿಯಾಗಿದ್ದೇನೆ. ಡಿ.ಕೆ. ಸುರೇಶ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಭೀಮಾನಾಯ್ಕ ತಿಳಿಸಿದರು. ಕೊನೆ ಗಳಿಗೆಯಲ್ಲಿ ಶಾಸಕ ಹಿಟ್ನಾಳ ಚುನಾವಣೆ ಅಖಾಡ ಪ್ರವೇಶಿಸಿ ಗೆಲುವು ಸಾಧಿಸಿದರು. ಇದರಿಂದ ನಿಮಗೆ ಹಿನ್ನಡೆಯಲ್ಲವೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭೀಮಾನಾಯ್ಕ, ಪಕ್ಷದ ನಾಯಕರ ತೀರ್ಮಾನದಂತೆ ಅಧಿಕಾರ ಹಂಚಿಕೆ ಮಾಡಲಾಗಿದೆ. ಯಾರು ಯಾರನ್ನು ತುಳಿಯಲು ಸಾಧ್ಯವಿಲ್ಲ. ನನಗೆ ಚೆಕ್ ಕೊಡುವ ಶಕ್ತಿ ಯಾರಿಗೂ ಇಲ್ಲ ಎಂದು ಆಕ್ರೋಶಗೊಂಡರು. ಗೆದ್ದು ತೋರಿಸಿದ್ದೇನೆ

ನಾನು ಒಕ್ಕೂಟಕ್ಕೆ ಬರುವ ಯಾವ ಉದ್ದೇಶವೂ ಇರಲಿಲ್ಲ. ಒಕ್ಕೂಟದ ಈ ಹಿಂದಿನ ಅಧ್ಯಕ್ಷ ಭೀಮಾನಾಯ್ಕ ದಮ್ಮು, ತಾಕತ್ತು ಇದ್ದರೆ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಸವಾಲು ಹಾಕಿದ್ದರು. ಹೀಗಾಗಿಯೇ ನಾಮಪತ್ರ ಸಲ್ಲಿಸಿ, ಗೆದ್ದು ತೋರಿಸಿದ್ದೇನೆ ಎಂದು ಒಕ್ಕೂಟದ ನೂತನ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ತಿಳಿಸಿದರು.

ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಭೀಮಾನಾಯ್ಕ ಹೇಳುವಂತೆ ಅಧಿಕಾರ ಹಂಚಿಕೆಯ ಯಾವ ಸೂತ್ರವೂ ಆಗಿಲ್ಲ. ಒಪ್ಪಂದವೂ ನಡೆದಿಲ್ಲ. ಭೀಮಾನಾಯ್ಕ ಅವರನ್ನು ರಾಜ್ಯ ಡೆಲಿಗೇಟ್ ಆಗಿ ಕಳಿಸುವ ಕುರಿತು ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ದಮ್ಮು, ತಾಕತ್ತು ಬಗ್ಗೆ ನನಗೆ ತಿಳಿದಿಲ್ಲ. ನೀವು ಭೀಮಾನಾಯ್ಕ ಅವರನ್ನೇ ಕೇಳಬೇಕು ಎಂದು ಸುದ್ದಿಗಾರರಿಗೆ ಹಿಟ್ನಾಳ ಪ್ರತಿಕ್ರಿಯಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಬೋಸ್‌ರಾಜ್, ಶಿವರಾಜ ತಂಗಡಗಿಯವರ ಆಶೀರ್ವಾದ ಹಾಗೂ ಎಲ್ಲ ನಿರ್ದೇಶಕರ ಸಹಕಾರದಿಂದ ಒಕ್ಕೂಟದ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ. ನನ್ನ ಗೆಲುವಿಗೆ ಸಹಕರಿಸಿದವರಿಗೆ ವಂದನೆ ಸಲ್ಲಿಸುವೆ. ಹೈನುಗಾರಿಕೆಯನ್ನೇ ಆಶ್ರಯಿಸಿರುವ ರೈತರ ಹಿತ ಕಾಯುವ ಉದ್ದೇಶದಿಂದ ಒಕ್ಕೂಟ ರಚನೆಯಾಗಿದ್ದು, ರೈತರ ಹಿತ ಕಾಯುವ ಕಾರ್ಯ ಯೋಜನೆಗಳನ್ನು ರೂಪಿಸಲಾಗುವುದು. ಹೊಸ ತಂತ್ರಜ್ಞಾನದಿಂದ ಬಳ್ಳಾರಿಯಲ್ಲಿಯೇ ಮೇಗಾ ಡೈರಿ ಸ್ಥಾಪಿಸಲಾಗುವುದು. ಒಕ್ಕೂಟ ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದ್ದು, ಮುಂದಿನ ಸಭೆಯಲ್ಲಿ ಚರ್ಚಿಸಿ ಒಕ್ಕೂಟದ ಅಸಮಾತೋಲನ ಸರಿಪಡಿಸುವ ಕುರಿತು ಸೂಕ್ತ ನಿಲುವು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕೆಎಂಎಫ್ ಅಧ್ಯಕ್ಷನಾಗುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.