ಕಾಂಗ್ರೆಸ್ ಹೈಕಮಾಂಡ್‌ ಸಚಿವ ಸಂಪುಟ ವಿಸ್ತರಣೆಯ ವೇಳೆ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರನ್ನು ಮಂತ್ರಿಗಿರಿಗೆ ಪರಿಗಣಿಸುವರೆಂಬ ವಿಶ್ವಾಸವಿತ್ತು, ಆದರೆ ಕೊನೆ ಗಳಿಗೆಯಲ್ಲಿ ಕೈ ಕೊಟ್ಟಿರುವುದು ಕ್ಷೇತ್ರದ ಜನರಿಗಲ್ಲ, ಇಡೀ ಕೋಲಾರ ಜಿಲ್ಲೆಯ ಜನರಿಗೆ ಕಾಂಗ್ರೆಸ್ ಪಕ್ಷ ಮಾಡಿದ ನಂಬಿಕೆ ದ್ರೋಹವಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆ ಆವೇಶ ಭರಿತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂಗಾರಪೇಟೆ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.

ಬೆಳಗ್ಗೆಯಿಂದಲೇ ಕಾಂಗ್ರೆಸ್ ಬೆಂಬಲಿತರು ನಗರದಲ್ಲಿ ಸಂಚರಿಸಿ ಕಾಂಗ್ರೆಸ್ ಹೈಕಮಾಂಡ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೈ ತಪ್ಪಿರುವ ಶಾಸಕರಿಗೆ ಮಂತ್ರಿಗಿರಿಯನ್ನು ಮತ್ತೆ ನೀಡಲೇಬೇಕೆಂದು ಆಗ್ರಹಿಸಿದರು.

ಬಂದ್‌ಗೆ ನಗರದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ವರ್ತಕರು ಬೆಂಬಲ ಸೂಚಿಸಿದ್ದರಿಂದ ಗುರುವಾರ ಸದಾ ಜನರಿಂದ ತುಂಬಿರುತ್ತಿದ್ದ ಬಜಾರ್ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು, ಬಂದ್‌ ಇರುವ ಬಗ್ಗೆ ಮೊದಲೇ ಪ್ರಚಾರ ಮಾಡಿದ್ದರಿಂದ ಗ್ರಾಮೀಣ ಭಾಗದ ಜನರು ನಗರದ ಕಡೆ ಸುಳಿಯಲಿಲ್ಲ. ಖಾಸಗಿ ಶಾಲೆ, ಕಾಲೇಜುಗಳೂ ಬಂದ್ ಹಿನ್ನೆಲೆ ರಜೆ ನೀಡಿದ್ದವು. ಉಳಿದಂತೆ ಸರ್ಕಾರಿ ಕಚೇರಿಗಳು ಆರಂಭವಾಗಿ, ಸಾರಿಗೆ, ಆಟೋಗಳು, ಖಾಸಗಿ ಬಸ್ಗಳೂ ಎಂದಿನಂತೆ ಸಂಚರಿಸಿದವು.

10.30ರ ವೇಳೆಗೆ ನೂರಾರು ಕಾಂಗ್ರೆಸ್ ಬೆಂಬಲಿತರು ಕೋಲಾರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಬಸ್ ನಿಲ್ದಾಣದಲ್ಲಿ ಮೆರವಣಿಗೆ ಅಂತ್ಯವಾಯಿತು.

ಈ ವೇಳೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕಾಂಗ್ರೆಸ್ ಹೈಕಮಾಂಡ್‌ ಸಚಿವ ಸಂಪುಟ ವಿಸ್ತರಣೆಯ ವೇಳೆ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರನ್ನು ಮಂತ್ರಿಗಿರಿಗೆ ಪರಿಗಣಿಸುವರೆಂಬ ವಿಶ್ವಾಸವಿತ್ತು, ಆದರೆ ಕೊನೆ ಗಳಿಗೆಯಲ್ಲಿ ಕೈ ಕೊಟ್ಟಿರುವುದು ಕ್ಷೇತ್ರದ ಜನರಿಗಲ್ಲ, ಇಡೀ ಕೋಲಾರ ಜಿಲ್ಲೆಯ ಜನರಿಗೆ ಕಾಂಗ್ರೆಸ್ ಪಕ್ಷ ಮಾಡಿದ ನಂಬಿಕೆ ದ್ರೋಹವಾಗಿದೆ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಹ ಆ ಸಮುದಾಯದ ಶಾಸಕರಾಗಿರುವ ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡದೆ ದಲಿತ ಬಲಗೈ ಸಮುದಾಯಕ್ಕೆ ಮೋಸ ಮಾಡಿದೆ, ಸದಾ ಹೊರಗಿನವರಿಗೇ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನ ನೀಡಿ ಅಭಿವೃದ್ಧಿಗೆ ಮಾರಕವಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ಹೈಕಮಾಂಡ್ ಬಾಕಿ ಉಳಿಸಿಕೊಂಡಿರುವ ಒಂದು ಸಚಿವ ಸ್ಥಾನವನ್ನು ಎಸ್.ಎನ್.ನಾರಾಯಣಸ್ವಾಮಿಗೆ ನೀಡುವ ಮೂಲಕ ಡ್ಯಾಮೇಜ್ ಸರಿಪಡಿಸಬೇಕೆಂದು ಆಗ್ರಹಿಸಿದರು.

ಇಲ್ಲದಿ್ದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ್, ಶ್ರೀನಿವಾಸ್, ಚಂದ್ರು, ಮುಖಂಡರಾದ ಪಾರ್ಥಸಾರಥಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಅ.ನಾ.ಹರೀಶ್, ಗೋವಿಂದ, ವೆಂಕಟೇಶ್, ರಾಕೇಶಗೌಡ, ಶಫಿ, ಪ್ರಶಾಂತ್, ವಡ್ರಹಳ್ಳಿ ಗೋವಿಂದಪ್ಪ, ಡಿಸಿಸಿ ಬ್ಯಾಂಕಿನ ನಿರ್ದೇಶಕ ರಂಗಾಚಾರಿ, ನವೀನ್ ಗೌಡ ಸೇರಿ ಇತರರು ಇದ್ದರು.