ಸಾರಾಂಶ
ಕೂಡ್ಲಿಗಿ: ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರ ಬಂದ ಹಿನ್ನೆಲೆಯಲ್ಲಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳ ಕಡೆ ಗಮನಹರಿಸದೇ ಮೊಬೈಲ್ ನೋಡುತ್ತಾ ಕೂರುತ್ತಾರೆಂಬ ಆರೋಪಗಳಿವೆ. ರಾತ್ರಿ ವೇಳೆ ವಿದ್ಯುತ್ ಸಮಸ್ಯೆಯಾದರೂ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಗಮನಹರಿಸುವುದಿಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾದರೆ ಹೇಗೆ? ಇನ್ಮುಂದೆ ಇಂಥ ತಪ್ಪುಗಳು ಆಸ್ಪತ್ರೆಯಲ್ಲಿ ನಡೆಯಬಾರದು ಎಂದು ಎಚ್ಚರಿಕೆ ನೀಡಿದರು.ಕೂಡ್ಲಿಗಿ ಸರ್ಕಾರಿ ಆಸ್ಪತ್ರೆ ಗಂಟೆಗೂ ಹೆಚ್ಚು ಕಾಲ ಕತ್ತಲಲ್ಲಿ ಇದೆ ಎಂಬ ಬಗ್ಗೆ ''''ಕನ್ನಡಪ್ರಭ''''ದಲ್ಲಿ ವರದಿ ಪ್ರಕಟವಾಗಿತ್ತು. ಶಾಸಕರು ಅಲ್ಲಿಯ ಪರಿಸ್ಥಿತಿ ಅವಲೋಕಿಸಿದರು. ರಾತ್ರಿ ಸಮಯದಲ್ಲಿ ಇಬ್ಬರು ವೈದ್ಯರು, ಮೂವರು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುವುದರಿಂದ ಹೆಚ್ಚಿನ ಸಿಬ್ಬಂದಿ ನೇಮಿಸಿ. ಅದರಂತೆ, ಸಾಕಷ್ಟು ಡಿ ಗ್ರೂಪ್ ನೌಕರರಿದ್ದರೂ ಆಸ್ಪತ್ರೆ ಸ್ವಚ್ಛತೆ ಇಲ್ಲದಂತಾಗಿದೆ. ಆಸ್ಪತ್ರೆಯ ಒಳ ರೋಗಿಗಳಿಗೆ ಊಟ ಸರಿಯಾಗಿ ಕೊಡುವುದಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ಶುಚಿ, ರುಚಿಯಾದ ಊಟ ಕೊಡಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಆಸ್ಪತ್ರೆಯ ಎಲ್ಲ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬಂದು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಸಾಕಷ್ಟು ಸಲ ಕೇಳಿಬಂದಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವುದಾದರೆ ಇರಿ, ಇಲ್ಲಾಂದ್ರೆ ಜಾಗ ಖಾಲಿ ಮಾಡಿ ಎಂದು ಶಾಸಕರು ಖಡಕ್ ಸಂದೇಶ ನೀಡಿದರು. ಎಲ್ಲ ಸಿಬ್ಬಂದಿ ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು. ಇಲ್ಲವಾದರೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಮಾತನಾಡಿದರು. ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ್ ನಾಯ್ಕ, ಟಿಎಚ್‌ಒ ಡಾ. ಎಸ್.ಪಿ. ಪ್ರದೀಪ್ ಕುಮಾರ್, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಧು, ಆಸ್ಪತ್ರೆ ವೈದ್ಯ ಡಾ. ಸಲೀಂ, ಮುಖಂಡರಾದ ಪ್ರಭಾಕರ, ಡಾಣಿ ರಾಘವೇಂದ್ರ ಇತರರಿದ್ದರು.