ನರೇಗಾ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಬಳಸಿ

| Published : Jul 04 2024, 01:05 AM IST

ಸಾರಾಂಶ

ಹಾಸನ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕಾರ್ಲೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ನಡೆ ರೈತರ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿಮೆಂಟ್‌ ಮಂಜು, ನರೇಗಾ ಸೌಲಭ್ಯವನ್ನು ಬಳಸಿಕೊಳ್ಳಲು ಕರೆ ನೀಡಿದರು. ಇದೇ ವೇಳೆ ಶಾಸಕರು ನರೇಗಾ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಟ್ಟಿಗೆ, ತೆಂಗು, ಅಡಿಕೆ, ಬಾಳೆ ಸೇರಿದಂತೆ ವಿವಿಧ ಸೌಲಭ್ಯಗಳ ವೈಯಕ್ತಿಕ ಕಾರ್ಯಾದೇಶ ಪ್ರತಿಯನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್‌ ಮಂಜು ಸಲಹೆ ನೀಡಿದರು.

ಹಾಸನ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕಾರ್ಲೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ನಡೆ ರೈತರ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನರೇಗಾ ಯೋಜನೆಯಡಿ ದೊರೆಯುವ ವೈಯಕ್ತಿಕ ಕೊಟ್ಟಿಗೆ, ಬದು, ತೆಂಗು, ಬಾಳೆ, ಅಡಿಕೆ ಸೇರಿ ವಿವಿಧ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ಅವರು ಸಲಹೆ ನೀಡಿದರು.

ಇದೇ ವೇಳೆ ಶಾಸಕರು ನರೇಗಾ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಟ್ಟಿಗೆ, ತೆಂಗು, ಅಡಿಕೆ, ಬಾಳೆ ಸೇರಿದಂತೆ ವಿವಿಧ ಸೌಲಭ್ಯಗಳ ವೈಯಕ್ತಿಕ ಕಾರ್ಯಾದೇಶ ಪ್ರತಿಯನ್ನು ವಿತರಿಸಿದರು.

ಹಾಸನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಎಚ್.ಡಿ ಅವರು ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾಬ್‌ ಕಾರ್ಡ್‌ ಹೊಂದಿರುವ ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ ೧೦೦ ದಿವಸಗಳ ಕೆಲಸ ನೀಡಲಾಗುವುದು. ಮಹಿಳೆ ಮತ್ತು ಪುರುಷರಿಗೆ ಸಮಾನವಾಗಿ ದಿನಕ್ಕೆ ೩೪೯ ರುಪಾಯಿಗಳ ದಿನಗೂಲಿ ನೀಡಲಾಗುವುದು. ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಾನುವಾರು ಕೊಟ್ಟಿಗೆ, ಕುರಿ ಶೆಡ್‌, ತೆಂಗು, ಅಡಿಕೆ, ಬಾಳೆ ಸೇರಿದಂತೆ ನರೇಗಾ ಯೋಜನೆಯಡಿ ವೈಯಕ್ತಿಕವಾಗಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು ಯೋಜನೆಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ, ಉಪಾಧ್ಯಕ್ಷೆ ನಂದಿನಿ ಕುಮಾರಿ, ಕಾರ್ಲೆ ಗ್ರಾಮ ಪಂಚಾಯಿತಿ ಸದಸ್ಯರು, ಹಾಸನ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಕಾರ್ಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೀಮಾ ತರನಂ, ದ್ವಿತೀಯ ದರ್ಜೆ ಸಹಾಯಕ ರಾಮಕೃಷ್ಣ, ಹಾಸನ ತಾಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ರಾಜೇಶ್ ಮತ್ತಿತರರು ಹಾಜರಿದ್ದರು.