ಸಾರಾಂಶ
ಗುಂಡ್ಲುಪೇಟೆಯಲ್ಲಿ ಡಿ.೨೩ರಂದು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ನಡೆವ ಪ್ರತಿಭಟನೆಗೆ ಅರೇಪುರ ಗ್ರಾಮದಲ್ಲಿ ಕಾರ್ಯಕರ್ತರನ್ನು ಆಹ್ವಾನಿಸುತ್ತಿರುವುದು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕ್ಷೇತ್ರದ ಬಿಜೆಪಿಗರು ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ದಲಿತ ವಿರೋಧಿ ಎಂದು ಬಣ್ಣಿಸಲು ಹೊರಟಿರುವ ಬೆನ್ನಲ್ಲೇ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿದ್ದು, ದಲಿತ ವಿರೋಧಿ ಎನ್ನುತ್ತಿರುವ ಬಿಜೆಪಿಗೆ ಹೆಚ್ಚಿನ ಮಟ್ಟದಲ್ಲಿ ದಲಿತರನ್ನೇ ಸೇರಿಸುವ ಮೂಲಕ ಬಿಜೆಪಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ.ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಅಂಬೇಡ್ಕರ್ ಸಂವಿಧಾನ ಪರಿ ನಿರ್ವಾಣ ದಿನಾಚರಣೆಯಲ್ಲಿ ದಲಿತ ಮುಖಂಡರೊಬ್ಬರಿಗೆ ಶಾಸಕರು ಅವಮಾನ ಮಾಡಿದ್ದಾರೆ. ಅಲ್ಲದೆ ರಾಜಕೀಯ ಪ್ರಭಾವ ಬಳಸಿ ದಲಿತರ ಜಮೀನಿನಲ್ಲಿ ರಸ್ತೆ ನಿರ್ಮಿಸಲು ಮುಂದಾಗುವ ಮೂಲಕ ದಲಿತ ವಿರೋಧಿಯಾಗಿದ್ದಾರೆ ಎಂದು ಬಿಜೆಪಿಗರು ಇತ್ತೀಚೆಗೆ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದ್ದರು. ಬಿಜೆಪಿಗರ ಆರೋಪ, ಟೀಕೆಗೆ ಉತ್ತರ ನೀಡಲು ಶಾಸಕ ಗಣೇಶ್ ಪ್ರಸಾದ್ ಮುಂದಾಗಿದ್ದು, ಇತ್ತೀಚೆಗೆ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾ.ಅಂಬೇಡ್ಕರ್ ಕುರಿತು ಮಾತನಾಡಿರುವುದನ್ನು ಖಂಡಿಸಿ, ದಲಿತ ವಿರೋಧಿ ಪಟ್ಟ ಕಟ್ಟಲು ಪ್ರಯತ್ನಿಸಿರುವ ಬಿಜೆಪಿಗರಿಗೆ ಟಾಂಗ್ ನೀಡಲು ಸಾವಿರಾರು ಮಂದಿ ದಲಿತರನ್ನೇ ಸೇರಿಸಿ ಡಿ.೨೩ ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ದಲಿತ ಮುಖಂಡರು ದಲಿತರನ್ನು ಕರೆತರಲು ಖುದ್ದು ಗ್ರಾಮಗಳಿಗೆ ತೆರಳಿ ಪ್ರತಿಭಟನೆಗೆ ಆಹ್ವಾನಿಸಲು ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಡಿ.೨೩ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರನ್ನು ಸೇರಿಸಿ, ದಲಿತ ವಿರೋಧಿಯಲ್ಲ ಎಂದು ತೋರಿಸಲು ಗಣೇಶ್ ಪ್ರಸಾದ್ ಪ್ರಯತ್ನಿಸಿದ್ದಾರೆ. ಇತ್ತೀಚೆಗೆ ಬಿಜೆಪಿಯ ಸ್ಥಳೀಯ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಶಾಸಕರನ್ನು ದಲಿತ ವಿರೋಧಿ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.