ಸಾರಾಂಶ
ಈ ಬಾರಿ ಏಕೆ ಶಾಸಕನಾದೆ ಎಂದು ಕಾಂಗ್ರೆಸ್ ಶಾಸಕರು ಪಶ್ಚಾತ್ತಾಪ ಪಡುತ್ತಿದ್ದಾರೆ.
ಹೊಸಪೇಟೆ: ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ವಿಜಯನಗರ ವಿಧಾನಸಭಾ ಕ್ಷೇತ್ರದ ಮಂಡಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಗ್ಯಾರಂಟಿ ಯೋಜನೆಯಲ್ಲಿ ಮುಳುಗಿರುವ ಸರ್ಕಾರ ಶಾಸಕರಿಗೆ ಅನುದಾನ ನೀಡಿಲ್ಲ. ಈ ಬಾರಿ ಏಕೆ ಶಾಸಕನಾದೆ ಎಂದು ಕಾಂಗ್ರೆಸ್ ಶಾಸಕರು ಪಶ್ಚಾತ್ತಾಪ ಪಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಹಾಗೂ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಜನರಿಗೆ ಮನಮುಟ್ಟುವಂತೆ ಜಾಗೃತಿ ಮೂಡಿಸಬೇಕಿದೆ. ಆದ್ದರಿಂದ ಮಂಡಳದಲ್ಲಿ ನೂತನ ಪದಾಧಿಕಾರಿಗಳು ಪಕ್ಷ ಕೊಟ್ಟಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಮನೆ ಮನೆಗಳಲ್ಲಿ ಬಿಜೆಪಿ ಬೇರೂರಬೇಕಿದೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿ ಎಂದರು.ಬಿಜೆಪಿ ಕಾರ್ಯಕರ್ತರು ಭಾರಿ ವಿಭಿನ್ನವಾಗಿರುತ್ತಾರೆ. ಬಿಜೆಪಿಯಲ್ಲಿ ಯಾವುದೇ ಘಟಕವಾಗಲಿ, ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ ಮುಂದಿನ ಅಧ್ಯಕ್ಷರು ಯಾರು ಎಂಬುದು ನಿಗದಿತವಾಗಿರಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತರು ಕೂಡ ಉನ್ನತ ಹುದ್ದೆ ಅಲಂಕಾರಿಸುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಈ ಸಂಸ್ಕೃತಿ ಇಲ್ಲ. ನೆಹರು ಅವರಿಂದ ಹಿಡಿದು, ಮಗಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸರದಿಯಲ್ಲಿ ಅಧಿಕಾರ ಅನುಭವಿಸುವ ಪಕ್ಷವಾಗಿದೆ. ನೆಹರು ಅವರ ಕುಟುಂಬವೇ ಇಲ್ಲಿ ಅಂತಿಮ ನಿರ್ಣಾಯಕರು ಎಂದರು.
ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ ಸಿಂಗ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್, ನಗರಸಭೆ ಅಧ್ಯಕ್ಷೆ ಲತಾ, ಮುಖಂಡರಾದ ಅಶೋಕ್ ಜೀರೆ, ಶಂಕರ ಮೇಟಿ, ಸಾಲಿ ಸಿದ್ದಯ್ಯಸ್ವಾಮಿ, ಜಂಬಯ್ಯನಾಯಕ, ಕಿಚಡಿ ಶ್ರೀನಿವಾಸ್, ರೇವಣ್ಣಸಿದ್ದಪ್ಪ, ಅರುಂಡಿ ಸುವರ್ಣಮ್ಮ, ಬಸವರಾಜ್ ನಾಲತ್ವಾಡ ಇತರರಿದ್ದರು.