- ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಅಲ್ಲ, ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದೇಶ ಪ್ರವಾಸಕ್ಕೆ ಹೋಗುವ ಶಾಸಕರಿಗೆ ಶುಭ ಕೋರುತ್ತೇನೆ. ಆದರೆ, ಬಜೆಟ್ ಪೂರ್ವಭಾವಿ ಸಭೆಗಳ ಹೊತ್ತಿನಲ್ಲಿ ಶಾಸಕರ ವಿದೇಶ ಪ್ರವಾಸದ ಅವಶ್ಯಕತೆಯೇ ಇರಲಿಲ್ಲ. ಮುಖ್ಯಮಂತ್ರಿಗಳು ಮಾ.6ರಂದು ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ ಹಿನ್ನೆಲೆ ಶಾಸಕರು ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಂಡು, ತಮ್ಮ ತಮ್ಮ ಕ್ಷೇತ್ರಕ್ಕೆ ಅನುದಾನ, ಆಗಬೇಕಾದ ಕೆಲಸ, ಕಾರ್ಯ, ಯೋಜನೆಗಳಿಗೆ ಅನುದಾನವನ್ನು ಕೇಳಬೇಕು. ಹಾಗಾಗಿ ವಿದೇಶ ಪ್ರವಾಸಕ್ಕೆ ಇದು ಸೂಕ್ತ ಸಂದರ್ಭವಾಗಿಲ್ಲ. ವಿದೇಶ ಪ್ರವಾಸಕ್ಕೆ ದೇವೇಂದ್ರಪ್ಪನವರೂ ಹೊರಟ್ದಿದ್ದಾರೆ ಎಂಬುದನ್ನು ಕೇಳ್ಪಟ್ಟೆ. ಅವರಿಗೂ ಕರೆ ಮಾಡಿ ಶುಭ ಕೋರುತ್ತೇನೆ ಎಂದರು.


ಹೈಕಮಾಂಡ್‌ ಅಲ್ಲ, ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು:

ಅಧಿಕಾರ ಹಂಚಿಕೆ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗುತ್ತಾರೆಂದು ಡಿಸೆಂಬರ್‌ನಲ್ಲೇ ನಾನು ರಕ್ತದಲ್ಲಿ ಬರೆದು ಕೊಡುತ್ತೇನೆಂದು ಹೇಳಿದ್ದೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಅಲ್ಲ, ಸಿಎಂ ಸಿದ್ದರಾಮಯ್ಯನವರು ಸ್ಪಷ್ಟಪಡಿಸಬೇಕು. ಆಗ ನಾವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದೂ ತಪ್ಪುತ್ತದೆ ಎಂದರು.

141ಕ್ಕಿಂತ ಹೆಚ್ಚು ಸ್ಥಾನ:

ಮುಂದಿನ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಹೇಳಿದಂತೆ 141ಕ್ಕಿಂತ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಬರುತ್ತವೆ. ಆದರೆ, ಮುಖ್ಯಮಂತ್ರಿ ಕುರ್ಚಿ ಕುರಿತ ಹೇಳಿಕೆ, ಗೊಂದಲದಿಂದ ನಾವೇ ಆಡಳಿತ ಪಕ್ಷ- ನಾವೇ ವಿರೋಧ ಪಕ್ಷದಂತಾಗಿದ್ದೇವೆ. ತಕ್ಷಣವೇ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ, ಸಿಎಂ ಕುರ್ಚಿ ವಿಚಾರ ಇತ್ಯರ್ಥಪಡಿಸಲಿ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತದೆ. ನಾವು ಮೊದಲ ಸಲ ಶಾಸಕರಾಗಿದ್ದೇವೆ. ಹೈಕಮಾಂಡ್ ಬಳಿ ಹೋಗಿ ಮಾತನಾಡುವಷ್ಟು ದೊಡ್ಡವರಲ್ಲ. ಹಾಗಾಗಿಯೇ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಬಸವರಾಜ ಶಿವಗಂಗಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

- - -

(ಟಾಪ್‌ ಕೋಟ್‌) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಶಾಮನೂರು ಶಿವಶಂಕರಪ್ಪ ಅವರು ಇದೇ ತಮ್ಮ ಕೊನೆಯ ಚುನಾವಣೆ. ಮುಂದೆ ಮುಸ್ಲಿಮರಿಗೆ ಟಿಕೆಟ್ ನೀಡುವ ಹೇಳಿಕೆ ನೋಡಿದ್ದೇನೆ. ಆದರೆ, ಈಗ ನುಡಿದಂತೆ ನಡೆಯುವವರು ಯಾರು ಇರುತ್ತಾರೆ ಹೇಳಿ? ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಇವತ್ತೇ ಮುಖ್ಯಮಂತ್ರಿ ಆಗಲಿ ಎನ್ನುವವರಲ್ಲಿ ನಾನೇ ಮೊದಲಿಗ.

- ಬಸವರಾಜ ವಿ.ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.