ಆಶ್ರಯ ನಿವೇಶನ ಬಡಾವಣೆಗಳ ಜಮೀನು ವೀಕ್ಷಿಸಿದ ಶಾಸಕರು

| Published : Aug 16 2025, 12:00 AM IST

ಆಶ್ರಯ ನಿವೇಶನ ಬಡಾವಣೆಗಳ ಜಮೀನು ವೀಕ್ಷಿಸಿದ ಶಾಸಕರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕ್ಷೇತ್ರದಲ್ಲಿರುವ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಗುರುತಿಸಿರುವ ಆಶ್ರಯ ನಿವೇಶನ ಬಡಾವಣೆ ಜಮೀನುಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಮನಗರ: ಕ್ಷೇತ್ರದಲ್ಲಿರುವ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಗುರುತಿಸಿರುವ ಆಶ್ರಯ ನಿವೇಶನ ಬಡಾವಣೆ ಜಮೀನುಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಇಕ್ಬಾಲ್ ಹುಸೇನ್ ರವರು ತಹಶೀಲ್ದಾರ್ ತೇಜಸ್ವಿನಿ, ನಗರಸಭೆ ಆಯುಕ್ತ ಜಯಣ್ಣ ಸೇರಿದಂತೆ ಅಧಿಕಾರಿಗಳ ತಂಡ ತಾಲೂಕಿನ ಬಿಳಗುಂಬ, ಬಸವನಪುರ, ದೊಡ್ಡಮಣ್ಣು ಗುಡ್ಡೆ, ಕೊತ್ತಿಪುರ ಸುಗ್ಗನಹಳ್ಳಿ ಸೇರಿದಂತೆ ವಿವಿಧ ಕಡೆ ಆಶ್ರಯ ನಿವೇಶನ ಬಡಾವಣೆ ನಿರ್ಮಾಣಕ್ಕೆ ಗುರುತಿಸಿರುವ ಜಮೀನು ಸ್ಥಳ ಪರಿಶೀಲಿಸಿದರು.

ಈ ಯೋಜನೆ ಅನುಷ್ಠಾನ ಪ್ರಗತಿಯ ಮಾಹಿತಿ ಪಡೆದ ಶಾಸಕರು ತ್ವರಿಗತಿಯಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ, ಜಮೀನು ವಿಚಾರವಾಗಿ ಕೆಲ ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬಳಿಕ ಮಾತನಾಡಿದ ಇಕ್ಬಾಲ್ ಹುಸೇನ್, ಬಡವರಿಗೆ ನಿವೇಶನ ನೀಡುವ ವಿಚಾರದಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ಇದಕ್ಕಾಗಿ ನಾವು, ನಮ್ಮ ಅಧಿಕಾರಿಗಳ ತಂಡ ಬದ್ಧತೆಯಿಂದ ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಗರದ ಸುತ್ತಮುತ್ತಲು ಬಡವರಿಗೆ ನಿವೇಶನ ಕೊಡಲು 258 ಎಕರೆ ಜಮೀನನ್ನು ಗುರುತಿಸಿದ್ದೇವೆ. ಈ ಪೈಕಿ 196 ಎಕರೆ ಭೂಮಿಯನ್ನು ತಹಸೀಲ್ದಾರ್ ಆಯಾಯ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ. ಉಳಿದ ಜಮೀನಿನ ಬಗ್ಗೆ ಸ್ವಲ್ಪ ಸಮಸ್ಯೆಗಳಿವೆ. ಅವುಗಳನ್ನು ಪರಿಶೀಲಿಸಿ ನಕಲಿ ದಾಖಲೆಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಂಡು, ಅದನ್ನೂ ಸಹ ಆಶ್ರಯ ನಿವೇಶನ ಯೋಜನೆ ವ್ಯಾಪ್ತಿಗೆ ತರುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಭರವಸೆ ಕೊಟ್ಟು ಈಡೇರಿಸದ ರಾಜಕಾರಣ ನಮ್ಮದಲ್ಲ. ಕೊಟ್ಟ ಮಾತನ್ನು ಈಡೇರಿಸಿಯೇ ತೀರುತ್ತೇವೆ. ಕಳೆದ 25 ವರ್ಷಗಳಿಂದ ನಿವೇಶನ ಹಂಚಿಕೆ ಮಾಡಿಲ್ಲ. ಸಿ.ಎಂ. ಲಿಂಗಪ್ಪರವರು ಶಾಸಕರಾಗಿದ್ದ ಅವಧಿಯಲ್ಲಿ ಬಡವರಿಗೆ ನಿವೇಶನ ಕೊಟ್ಟಿದ್ದು ಹೊರತು ಪಡಿಸಿದರೆ ಆನಂತರ ಚುನಾಯಿತರಾದ ಶಾಸಕರು ಬಡವರನ್ನು ಮರೆತಿದ್ದರು ಎಂದು ಟೀಕಿಸಿದರು.

ಆಶ್ರಯ ಯೋಜನೆ ವಸತಿ ಬಡಾವಣೆಗಳಲ್ಲಿ ಸುಮಾರು 5 ಸಾವಿರ ನಿವೇಶನಗಳನ್ನು ನೀಡಬಹುದು. ಇದಕ್ಕಾಗಿ ನಿರ್ಮಿತಿ ಕೇಂದ್ರದವು ಬಡಾವಣೆಗಳ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯ ಬಗ್ಗೆ ಸುಮಾರು 26 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ. ವಸತಿ ಇಲಾಖೆಯಿಂದ ಶೀಘ್ರದಲ್ಲೇ ಈ ಅನುದಾನ ದೊರೆಯಲಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಯಗಾನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಂಜಿತ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ್ ಮತ್ತಿತರರು ಹಾಜರಿದ್ದರು.

ಕೋಟ್‌................

ದೊಡ್ಡಮಣ್ಣುಗುಡ್ಡೆ ಬಳಿ ನಿರ್ಮಾಣವಾಗಿರುವ ವಸತಿ ಸಮುಚ್ಚಯದಲ್ಲಿ ಮನೆಗಳನ್ನು ಹಂಚಿಕೆ ಮಾಡುವ ಸಂಬಂಧ ಅರ್ಹ ಫಲಾನುಭವಿಗಳ ಆಯ್ಕೆಯನ್ನು ಎನ್ನೆರಡು ತಿಂಗಳಲ್ಲಿ ಮಾಡುತ್ತೇವೆ. ಇಲ್ಲಿ ನಿರ್ಮಾಣವಾಗಿರುವ 240 ಮನೆಗಳಿಗೆ ಬಾಗಿಲು, ಕಿಟಕಿ, ಸುಣ್ಣ-ಬಣ್ಣ, ಟ್ಯಾಂಕ್, ಪೈಪ್‌ಲೈನ್, ವಿದ್ಯುತ್ ಸಂಕರ್ಪ ವ್ಯವಸ್ಥೆ ಕಲ್ಪಿಸಲು ಸ್ಲಂಬೋರ್ಡ್ 3 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಿದೆ. ವಸತಿ ಸಚಿವರು ಇದಕ್ಕಾಗಿ ಅನುದಾನ ನೀಡಿದ್ದಾರೆ. ಶೀಘ್ರದಲ್ಲೆ ಈ ಕಾಮಗಾರಿಗೂ ಚಾಲನೆ ನೀಡಲಾಗುವುದು. ಇನ್ನೆರಡು ತಿಂಗಳಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡುತ್ತೇವೆ.

- ಇಕ್ಬಾಲ್ ಹುಸೇನ್ , ಶಾಸಕರು , ರಾಮನಗರ ಕ್ಷೇತ್ರ15ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ಕ್ಷೇತ್ರದಲ್ಲಿರುವ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಗುರುತಿಸಿರುವ ಆಶ್ರಯ ನಿವೇಶನ ಬಡಾವಣೆ ಜಮೀನುಗಳಿಗೆ ಶಾಸಕ ಇಕ್ಬಾಲ್ ಹುಸೇನ್ ರವರು ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.