ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಆವರಣದಲ್ಲಿ ನಡೆದ ಜಾತ್ರಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಜ. 1 ರಿಂದ 7 ದಿನಗಳ ಕಾಲ ನಡೆಯುವ ತಾಲೂಕಿನ ಚುಂಚನಕಟ್ಟೆ ಜಾತ್ರೆ ಮತ್ತು 16 ರಂದು ಜರುಗಲಿರುವ ಶ್ರೀರಾಮ ದೇವರ ಬ್ರಹ್ಮರಥೋತ್ಸವಕ್ಕೆ ಯಾವುದೇ ತೊಡಕಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಡಿ. ರವಿಶಂಕರ್ ಹೇಳಿದರು.

ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಆವರಣದಲ್ಲಿ ನಡೆದ ಜಾತ್ರಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಜಾತ್ರೆ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದು, ಪಕ್ಕದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಜನ ಮತ್ತು ಜಾನುವಾರುಗಳು ಆಗಮಿಸಲಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಬ್ರಹ್ಮ ರಥ ಪರಿಶೀಲನೆ ನಡೆಸಿ ರಥ ಬೀದಿಯನ್ನು ಸ್ವಚ್ಛತೆಗೊಳಿಸುವುದರ ಜತೆಗೆ ಚುಂಚನಕಟ್ಟೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ ಕೆಲಸ ಆರಂಭಿಸಬೇಕೆಂದು ಸೂಚಿಸಿದರು.

ಕುಪ್ಪೆ ಗ್ರಾಪಂನಿಂದ ಜಾತ್ರಾ ಮತ್ತು ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಶುದ್ಧ ಕುಡಿಯುವ ನೀರಿನ ಸರಬರಾಜಿನ ವ್ಯವಸ್ಥೆ ಕಲ್ಪಿಸಬೇಕೆಂದ ಅವರು, ಪಶು ಸಂಗೋಪನ ಇಲಾಖೆಯಿಂದ ಜಾತ್ರೆಗೆ ಆಗಮಿಸುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಎರಡು ಕಡೆ ಕ್ಯಾಂಪ್ ಹಾಕಿ ಸೂಕ್ತ ಔಷಧೋಪಚಾರಗಳ ಸಂಗ್ರಹ ಮಾಡಿಕೊಳ್ಳಬೇಕಲ್ಲದೆ, ಆರೋಗ್ಯ ಇಲಾಖೆಯವರು ಪ್ರವಾಸಿ ಮಂದಿರದ ಬಳಿ ಮತ್ತು ಜಾತ್ರಾಮಾಳದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಬೇಕು ಎಂದು ಆದೇಶಿಸಿದರು.

ಸೆಸ್ಕ್‌ ನಿಂದ ಜಾತ್ರಾಮಾಳದ ಮೂಲೆ ಮೂಲೆಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಿ ಜ. 22ರವರೆಗೆ ಅಲಂಕಾರದ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಲೇಬೇಕೆಂದು ತಾಕೀತು ಮಾಡಿದ ಅವರು, ಪೊಲೀಸ್ ಇಲಾಖೆಯವರು ಜಾತ್ರಾ ಮಾಳದಲ್ಲಿ ಕರ್ಕಶ ಶಬ್ದ ಬರುವ ವಿಜಲ್ ಗಳನ್ನು ಬಳಸದಂತೆ ಎಚ್ಚರಿಕೆ ವಹಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಎಂದರು.

ಅಬಕಾರಿ ಇಲಾಖೆಯವರು ಮದ್ಯ ಮಾರಾಟವನ್ನು ರಥೋತ್ಸವದಂದು ನಿರ್ಬಂಧಿಸುವುದರ ಜತೆಗೆ ರಾತ್ರಿ ಹನ್ನೊಂದರ ನಂತರ ಮದ್ಯ ಮಾರಾಟವನ್ನು ನಿಲ್ಲಿಸಬೇಕೆಂದರಲ್ಲದೆ, ತಾಲೂಕು ಆಡಳಿತದ ವತಿಯಿಂದ ತಾತ್ಕಾಲಿಕ ಶೌಚಾಲಯ ಮತ್ತು ನದಿಯ ಆಸುಪಾಸಿನಲ್ಲಿ ಶೆಡ್ ಗಳನ್ನು ನಿರ್ಮಿಸಿ ಮಹಿಳಾ ಭಕ್ತಾದಿಗಳಿಗೆ ಬಟ್ಟೆ ಬದಲಿಸಲು ಅನುಕೂಲ ಕಲ್ಪಿಸಬೇಕಾಗಿ ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ನಟರಾಜು, ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ, ತಾಪಂ ಇಒ ರವಿಕುಮಾರ್, ಕುಪ್ಪೆ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಸದಸ್ಯೆ ಗೌರಮ್ಮ, ಬಿಇಒ ಆರ್. ಕೃಷ್ಣಪ್ಪ, ಸೆಸ್ಕ್‌ಎಇಇ ಆರ್ಕೇಶ್ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಉದಯ್ ಶಂಕರ್, ಮಹಾದೇವ್, ಕ್ಷೇತ್ರದ ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಡೇರಿ ಮಹದೇವ್, ಮಧು, ಗಿರೀಶ್ ಇದ್ದರು.