ಆಪರೇಷನ್ ಸಿಂದೂರ ಯಶಸ್ವಿಗಾಗಿ ಪ್ರಾರ್ಥಿಸಿ ಶಾಸಕರಿಂದ ದೇವಾಲಯದಲ್ಲಿ ವಿಶೇಷ ಪೂಜೆ

| Published : May 11 2025, 01:17 AM IST

ಆಪರೇಷನ್ ಸಿಂದೂರ ಯಶಸ್ವಿಗಾಗಿ ಪ್ರಾರ್ಥಿಸಿ ಶಾಸಕರಿಂದ ದೇವಾಲಯದಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಆಪರೇಷನ್ ಸಿಂದೂರ ಭಾರತೀಯ ಇತಿಹಾಸದಲ್ಲಿಯೇ ಒಂದು ಹೊಸ ಮೈಲಿಗಲ್ಲು. ಭಾರತೀಯ ಸೈನಿಕ ಪಡೆಗಳ ದಿಟ್ಟ ಹೋರಾಟ ಜಗತ್ತಿಗೆ ಗೋಚರವಾಗುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ಡ್ರೋನ್, ಕ್ಷಿಪಣಿ ಮತ್ತು ಮಿಸೈಲ್ ದಾಳಿಗೆ ಒಂದಿಂಚೂ ಬೆದರದೆ ಭಾರತೀಯ ಸೈನಿಕರು ದಿಟ್ಟ ಪ್ರತಿರೋಧ ವ್ಯಕ್ತಪಡಿ, ಪಾಕಿಸ್ತಾನದ ಒಳಗೆ ನುಗ್ಗಿ ತಮ್ಮ ಸೌರ್ಯ ಪ್ರದರ್ಶನ ಮಾಡಿ ಸಮಸ್ತ ಜಗತ್ತು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಾಕಿಸ್ತಾನದ ವಿರುದ್ಧ ಭಾರತ ಆರಂಭಿಸಿರುವ ಆಪರೇಷನ್ ಸಿಂದೂರ ಯಶಸ್ವಿಗೆ ಪ್ರಾರ್ಥಿಸಿ ಶಾಸಕ ಎಚ್.ಟಿ.ಮಂಜು ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಜೆಡಿಎಸ್ ಕಾರ್ಯಕರ್ತರು ಮತ್ತು ಹೊಸಹೊಳಲು ಗ್ರಾಮ ಮುಖಂಡರೊಂದಿಗೆ ತಮ್ಮ ಕುಲದೈವ ಕೋಟೆ ಭೈರವೇಶ್ವರನ ಸನ್ನಿಧಿಗೆ ಆಗಮಿಸಿದ ಶಾಸಕರು ಭಾರತೀಯ ಸೈನಿಕರಿಗೆ ಯಶಸ್ಸು ಕೋರಿ ವಿಶೇಷ ಅರ್ಚನೆ ಮತ್ತು ಪೂಜೆ ಸಲ್ಲಿಸಿದರು.

ಪೂಜೆ ನಂತರ ದೇವಾಲಯದ ಹೊರಭಾಗದಲ್ಲಿ ಭಾರತೀಯ ಸೈನಿಕರಿಗೆ ಮತ್ತು ಭಾರತ ಮಾತೆಗೆ ಜೈಕಾರ ಹಾಕಿದ ಶಾಸಕರು ಮತ್ತು ಅವರ ಬೆಂಬಲಿಗರ ಪಡೆ ಪಹಲ್ಗಾಂನಲ್ಲಿನ ಹಿಂದೂಗಳ ಹತ್ಯೆಗೆ ಪ್ರತಿಕಾರವಾಗಿ ಭಯೋತ್ಪಾದನೆಯ ಸಂಪೂರ್ಣ ನಿರ್ನಾಮಕ್ಕೆ ಮುಂದಾಗಿರುವ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದ ದಿಟ್ಟ ಹೆಜ್ಜೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಆಪರೇಷನ್ ಸಿಂದೂರ ಭಾರತೀಯ ಇತಿಹಾಸದಲ್ಲಿಯೇ ಒಂದು ಹೊಸ ಮೈಲಿಗಲ್ಲು. ಭಾರತೀಯ ಸೈನಿಕ ಪಡೆಗಳ ದಿಟ್ಟ ಹೋರಾಟ ಜಗತ್ತಿಗೆ ಗೋಚರವಾಗುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ಡ್ರೋನ್, ಕ್ಷಿಪಣಿ ಮತ್ತು ಮಿಸೈಲ್ ದಾಳಿಗೆ ಒಂದಿಂಚೂ ಬೆದರದೆ ಭಾರತೀಯ ಸೈನಿಕರು ದಿಟ್ಟ ಪ್ರತಿರೋಧ ವ್ಯಕ್ತಪಡಿ, ಪಾಕಿಸ್ತಾನದ ಒಳಗೆ ನುಗ್ಗಿ ತಮ್ಮ ಸೌರ್ಯ ಪ್ರದರ್ಶನ ಮಾಡಿ ಸಮಸ್ತ ಜಗತ್ತು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ ಎಂದರು.

ಭಾರತೀಯ ಸೈನಿಕರ ಆತ್ಮ ವಿಶ್ವಾಸ ವಿಶ್ವವೇ ಭಾರತದತ್ತ ಬೆರಗುಗಣ್ಣಿನಿಂದ ತಿರುಗಿ ನೋಡುವಂತೆ ಮಾಡಿದೆ. ಭಾರತೀಯ ಸಶಾಸ್ತ್ರ ಪಡೆ ಪಾಕ್‌ ಒಳಗೆ ನುಗ್ಗಿ ಭಯೋತ್ಪಾದಕರ ಎದೆ ಸೀಳಿರುವುದಲ್ಲದೆ ಪಾಕ್‌ ಸೈನ್ಯ ಮತ್ತು ನಾಯಕತ್ವದ ಎದೆ ನಡುಗಿಸುತ್ತಿದೆ ಎಂದರು.

ಎಲ್ಲ ಬಗೆಯ ಜಾತಿ, ಧರ್ಮ ಮತ್ತು ಪಕ್ಷ ಬೇದ ಮರೆತು ಭಾರತೀಯರೆಲ್ಲರನ್ನು ಆಪರೇಷನ್ ಸಿಂದೂರ ಒಂದುಗೂಡಿಸಿದೆಯಲ್ಲದೆ ಬದಲಾದ ಭಾರತದ ಅಂತಶಕ್ತಿಯನ್ನು ಜಗತ್ತಿಗೆ ಮುಂದೆ ಅನಾವರಣಗೊಳಿಸಿದೆ. ಹಿಂದೂ ಮಹಿಳೆಯರ ಸಿಂದೂರ ಅಳಿಸಿದ ಭಯೋತ್ಪಾದಕರು ನರಕ ಸೇರಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ದಿಟ್ಟ ಹೋರಟಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದನೆಯ ವಿರುದ್ದ ನಮ್ಮ ಸೈನಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಯಶಸ್ಸು ದೊರಕಬೇಕು. ವೀರ ಸೈನಿಕರಿಗೆ ಒಳಿತು ಬಯಸಿ ಕೋಟೆ ಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿರುವುದಾಗಿ ಶಾಸಕರು ತಿಳಿಸಿದರು.

ಈ ವೇಳೆ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಎಚ್.ಕೆ.ಅಶೋಕ್, ಪುರಸಭಾ ಸದಸ್ಯ ಅಶೋಕ್, ತಾಪಂ ಮಾಜಿ ಸದಸ್ಯ ರಾಜು, ಪುರಸಭೆ ಮಾಜಿ ಸದಸ್ಯ ಗೋಪಾಲ, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ, ವಿಎಸ್ ಎಸ್ ಎನ್ ನಿರ್ದೇಶಕ ಶ್ರೀಧರ, ಬೇಲದಕೆರೆ ನಂಜಪ್ಪ, ಚಿಕ್ಕೇಗೌಡ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.