ಗವಿಶ್ರೀ ಅವರ ಪ್ರಯತ್ನದಿಂದ ಹಿರೇಹಳ್ಳ ಸ್ವಚ್ಛಗೊಂಡು ಬ್ಯಾರೇಜ್ ನಿರ್ಮಾಣವಾಗಿವೆ. ಆದರೆ ಹಿರೇಹಳ್ಳಕ್ಕೆ ಚರಂಡಿ ನೀರು ಹರಿ ಬಿಡುವ ವ್ಯವಸ್ಥೆ ಹಾಗೆಯೇ ಮುಂದುವರಿದಿದೆ

ಕೊಪ್ಪಳ: ನಾಳೆಯಿಂದ ವಿಧಾನಸಭೆ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಈ ಸಲವಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಹುಡುಕಲಿ. ಇಲ್ಲವೇ ಮತದಾರರ ಕ್ಷಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ಷೇತ್ರಾದ್ಯಂತ ರಸ್ತೆಗಳು ಹದಗೆಟ್ಟಿವೆ. ಕಾಸನಕಂಡಿ ಗ್ರಾಮಕ್ಕೆ ಎರಡು ತಿಂಗಳಿಂದ ಬಸ್ ಸೇವೆ ಸ್ಥಗಿತಗೊಂಡಿದೆ. ಬಸ್ ಸೇವೆಗಾಗಿ ವಿದ್ಯಾರ್ಥಿಗಳು ರಸ್ತೆಗಿಳಿದಿದ್ದಾರೆ. ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಕಾರ್ಯಾರಂಭ ಮಾಡಿಲ್ಲ. ಮಾದಕ ವಸ್ತು ಮಾರಾಟ ಮಿತಿ ಮೀರಿದೆ. ಗವಿಶ್ರೀ ಅವರ ಪ್ರಯತ್ನದಿಂದ ಹಿರೇಹಳ್ಳ ಸ್ವಚ್ಛಗೊಂಡು ಬ್ಯಾರೇಜ್ ನಿರ್ಮಾಣವಾಗಿವೆ. ಆದರೆ ಹಿರೇಹಳ್ಳಕ್ಕೆ ಚರಂಡಿ ನೀರು ಹರಿ ಬಿಡುವ ವ್ಯವಸ್ಥೆ ಹಾಗೆಯೇ ಮುಂದುವರಿದಿದೆ. ಏತ ನೀರಾವರಿ ಯೋಜನೆಗಳು ಶೈತ್ಯಾಗಾರದಲ್ಲಿವೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣ ನಿಮ್ಮ ನಿಷ್ಕ್ರಿಯತೆ. ಶಾಸಕರಾಗಿ ಒಂದು ದಶಕ ಕಳೆದರೂ ಈ ಸಮಸ್ಯೆಗಳ ಬಗ್ಗೆ ತಾವು ಸದನದ ಗಮನ ಸೆಳೆದಿಲ್ಲ. ಪರಿಹಾರ ಹುಡುಕಿಲ್ಲ ಎಂದು ಚಂದ್ರಶೇಖರ ಆರೋಪಿಸಿದ್ದಾರೆ.

ಖಾಸಗಿ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಆರಂಭವಾದ ಧರಣಿ 40 ದಿನ ಮೀರಿದೆ. ಹೋರಾಟಗಾರರ ಬೇಡಿಕೆ ಕುರಿತು ನಿರ್ಲಕ್ಷ್ಯ ವಹಿಸಿದ್ದೀರಿ. ಈ ಸಮಸ್ಯೆ ಪರಿಹರಿಸಿ ಎಂಬ ಗವಿಶ್ರೀ ಹಿತನುಡಿಗೆ ನಿಮ್ಮ ಮೌನವೇ ಉತ್ತರವಾಗಿದೆ. ಕೊನೆಯ ಪಕ್ಷ ಈ ವಿಷಯ ಸದನದಲ್ಲಿ ಪ್ರಸ್ತಾಪಿಸಿ ಎಂದು ಒತ್ತಾಯಿಸಿದ್ದಾರೆ.

ಪ್ರತಿ ಸಲ ಸದನ ಆಯೋಜನೆಗೊಳ್ಳುವ ಮೊದಲು ನೀವು ಮಾತನಾಡಬೇಕೆಂದು ಕ್ಷೇತ್ರದ ಜನ ಬಯಸುತ್ತಾರೆ. ಆದರೆ ಸದನದಲ್ಲಿ ನೀವು ಮಾತನಾಡಿದ್ದನ್ನು ಯಾರೂ ಕೇಳಿಲ್ಲ, ನೋಡಿಲ್ಲ, ಈ ಸಲವಾದರೂ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡಿ ಎಂದು ಆಗ್ರಹಿಸಿದ್ದಾರೆ.