ಅಂಬೇಡ್ಕರ್ ಸಿದ್ಧಾಂತ ಪಾಲಿಸದ ಶಾಸಕರು: ಮಾಜಿ ಶಾಸಕ ಆರೋಪ

| Published : Jan 01 2025, 12:00 AM IST

ಅಂಬೇಡ್ಕರ್ ಸಿದ್ಧಾಂತ ಪಾಲಿಸದ ಶಾಸಕರು: ಮಾಜಿ ಶಾಸಕ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಅಮಿತ್ ಶಾ ಅವರು ಅಂಬೇಡ್ಕರ್ ವಿರುದ್ಧ ಉದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇನೆ. ಆ ವಿಚಾರವಾಗಿ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಬೊಬ್ಬ ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಅಂಬೇಡ್ಕರ್ ಬಗ್ಗೆ ಅನಾಗರಿಕವಾಗಿ ಮಾತನಾಡಿದ್ದು, ಈ ಸಂಬಂಧ ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಉತ್ತರ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ ಹೊರತು ಪಡಿಸಿ ಯಾರ ಸಿದ್ಧಾಂತ ನಡೆಯಬೇಕು, ಪಾಲಿಸಬೇಕು ಎಂಬುದನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಸ್ತಾಪಿಸಿದ್ದಾರೆ. ಅಂಬೇಡ್ಕರ್ ಸಿದ್ಧಾಂತ ಪಾಲಿಸಿದ ಅವರು ಅಂಬೇಡ್ಕರ್ ಅವರ ಮೀಸಲಾತಿಯಿಂದ ಗೆದ್ದು ಶಾಸಕ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕ ಹಕ್ಕಿದೆ ಎಂದು ಮಾಜಿ ಡಾ.ಕೆ.ಅನ್ನದಾನಿ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಅಂಬೇಡ್ಕರ್ ವಿರುದ್ಧ ಉದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇನೆ. ಆ ವಿಚಾರವಾಗಿ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಬೊಬ್ಬ ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಅಂಬೇಡ್ಕರ್ ಬಗ್ಗೆ ಅನಾಗರಿಕವಾಗಿ ಮಾತನಾಡಿದ್ದು, ಈ ಸಂಬಂಧ ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ನರೇಂದ್ರಸ್ವಾಮಿಗೆ ಸಿದ್ದರಾಮಯ್ಯ ಅವರ ಸಿದ್ಧಾಂತ ಬೇಕಾಗಿದೆ. ಅಧಿಕಾರ ಗಿಟ್ಟಿಸಿಕೊಳ್ಳಲು ಅಂಬೇಡ್ಕರ್ ಸಿದ್ಧಾಂತಕ್ಕೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಸಿದ್ಧಾಂತ ತ್ಯಜಿಸಿರುವ ಅವರಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ವಿಧಾನಸಭೆ ಪರಿಶಿಷ್ಟ ಶಾಸಕರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ಕ್ಷೇತ್ರದಲ್ಲಿ ಅವರನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಮಾತುಗಳನ್ನಾಡಿದ್ದಾರೆ. ಕ್ಷೇತ್ರದಲ್ಲಿ ತಾವು ಪಾಳೆಗಾರ ಇದ್ದಂತೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಳೆಗಾರಿಕೆ ಸಂಸ್ಕೃತಿ ಇಲ್ಲ. ಅದಕ್ಕೆ ಅಂಬೇಡ್ಕರ್ ಅವರು ಪಾಳೆಗಾರಿಕೆ ಅಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಗೂ ಪ್ರಶ್ನಿಸುವ ಹಕ್ಕು ನೀಡಿದ್ದಾರೆ ಎಂದು ಕುಟುಕಿದರು.

ಮಳವಳ್ಳಿಗೆ ಜ.5 ರಂದು ಕೇಂದ್ರ ಸಚಿವರು:

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಜನವರಿ 5 ರಂದು ತಾಲೂಕಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಅರ್ಪಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ.ಅನ್ನದಾನಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕಿರುಗಾವಲು ಸಂತೆಮಾಳ, ಪಟ್ಟಣದ ಎ ವೃತ್ತ, ಕಸಬಾ(ಹಾಡ್ಲಿ) ವೃತ್ತ ಮತ್ತು ಹಲಗೂರು ಹೋಬಳಿ ಕೇಂದ್ರಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದರು.

ಸಚಿವರು ಸಂಸತ್ತಿಗೆ ಆಯ್ಕೆಯಾಗಿ ಐದಾರು ತಿಂಗಳುಗಳಾಗಿವೆ. ಅವರ ಕೇಂದ್ರದಲ್ಲಿ ಎರಡು ಖಾತೆಗಳನ್ನು ನಿಭಾಯಿಸಿದ್ದರಿಂದ ಕೃತಜ್ಞತೆ ಸಲ್ಲಿಸಲು ತಡವಾಗಿದೆ. ಅದಕ್ಕೆ ಸಚಿವರ ಪರವಾಗಿ ಕ್ಷಮೆ ಕೋರುತ್ತೇನೆ. ಆದ್ದರಿಂದ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಈ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಳವಳ್ಳಿ ಜೆಡಿಎಸ್ ಕಾರ್ಯಾಧ್ಯಕ್ಷ ಚಿಕ್ಕಮಲಗೂಡು ಪುಟ್ಟಬುದ್ದಿ, ಯುವ ಜನತಾದಳ ಅಧ್ಯಕ್ಷ ಶ್ರೀಧರ್, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಜಯರಾಂ, ಜಿಪಂ ಮಾಜಿ ಸದಸ್ಯ ಹನುಮಂತು, ಕಾಂತರಾಜು, ಸಿದ್ದಾಚಾರಿ, ಕಿರುಗಾವಲು ಪ್ರಕಾಶ್, ನಾಗರಾಜು, ವೇಣುಗೋಪಾಲ್ ಇದ್ದರು.

ಚಿನ್ನಾಭರಣ ವಂಚನೆ: ಐಶ್ವರ್ಯಗೌಡರೊಂದಿಗೆ ಸ್ಥಳೀಯ ಕಾಂಗ್ರೆಸ್ಸಿಗರು ಭಾಗಿ; ಡಾ.ಕೆ.ಅನ್ನದಾನಿ ಆರೋಪ

ಚಿನ್ನಾಭರಣದ ಸಾಲ ಪಡೆದು ವಂಚಿಸಿ ರಾಜ್ಯಾದ್ಯಂತ ಸುದ್ದಿಯಾಗಿರುವ ಮಳವಳ್ಳಿ ತಾಲೂಕು ಕಿರುಗಾವಲು ಗ್ರಾಮದ ಐಶ್ವರ್ಯ ಗೌಡರೊಂದಿಗೆ ಸ್ಥಳೀಯ ಕಾಂಗ್ರೆಸ್ಸಿಗರು ಕೈ ಜೋಡಿಸಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.

ಈ ಪ್ರಕರಣದಲ್ಲಿ ಈಗಾಗಲೇ ಐಶ್ವರ್ಯಗೌಡ ಅಲಿಯಾಸ್ ನವ್ಯಶ್ರೀಯನ್ನು ಬಂಧಿಸಿದ್ದು, ತನಿಖೆಯನ್ನು ಸರಿಯಾದ ಹಾದಿಯಲ್ಲಿ ಪೊಲೀಸರು ಕೊಂಡೊಯ್ಯಬೇಕು. ಐಶ್ವರ್ಯ ಗೌಡ ಅನಾಚಾರಗಳು ಕಿರುಗಾವಲು ಗ್ರಾಮದಿಂದಲೇ ಪ್ರಾರಂಭವಾಗಿವೆ. ಅವರೊಟ್ಟಿಗೆ ಇಲ್ಲಿಂದಲೇ ಹಲವು ಸ್ಥಳೀಯ ಕಾಂಗ್ರೆಸ್ಸಿಗರು ಕೈಜೋಡಿಸಿದ್ದಾರೆ. ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ಸಿಗರು ಮಾತ್ರ ಭಾಗವಹಿಸುವ ಭಾವಚಿತ್ರಗಳು ಇವೆ ಎಂದರು.

ತಾಲೂಕಿನ ಕಾಂಗ್ರೆಸ್ ನಾಯಕರು ಐಶ್ವರ್ಯ ಗೌಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರಿಂದ ಆತಿಥ್ಯ ಸ್ವೀಕರಿಸಿದ್ದಾರೆ. ಈ ಸಂಬಂಧ ತಾಲೂಕಿನ ನಾಯಕರ ಹೆಸರು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದೆ. ಕಾಲ ಕ್ರಮೇಣ ಬದಲಾಗಿವೆ ಎಂದರು.

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹಾಗೂ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹೆಸರು ಬಹಿರಂಗಗೊಂಡಿದ್ದವು. ಇದು ತಾಲೂಕಿನ ಮುಖಂಡರು ಐಶ್ವರ್ಯಗೌಡ ಪ್ರಕರಣದಲ್ಲಿ ಭಾಗಿಯಾದಿದ್ದಾರೆ ಎಂಬುದಕ್ಕೆ ಸಾಕ್ಷಿ. ಈ ಪ್ರಕರಣದಲ್ಲಿ ಸರ್ಕಾರದ್ದೇ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಪ್ರಕರಣದ ತನಿಖೆ ಹಾದಿ ತಪ್ಪುವ ಆತಂಕವಿದೆ ಎಂದರು.

ಯಾವುದೇ ಕಾರಣಕ್ಕೂ ತನಿಖೆಯನ್ನು ಲಘುವಾಗಿ ಪರಿಗಣಿಸದೇ ಕಿರುಗಾವಲು ಗ್ರಾಮದಿಂದಲೇ ತನಿಖೆ ಆರಂಭಿಸಬೇಕು. ಜಿಲ್ಲೆಯಲ್ಲಿಯೂ ಐಶ್ವರ್ಯಗೌಡ ಅವರಿಂದ ವಂಚಿತರಾಗಿರುವ 4 ಪ್ರಕರಣಗಳಿವೆ. 2023ರ ಸಾರ್ವತ್ರಿಕ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಐಶ್ವರ್ಯಗೌಡ ಅವರ ನಡುವೆ ಹಣದ ವ್ಯವಹಾರ ನಡೆದಿದೆ ಎಂಬ ಗುಮಾನಿಯಿದೆ ಎಂದು ಗಂಭೀರ ಆರೋಪ ಮಾಡಿದರು.

ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ವಿರುದ್ಧ 2ರಿಂದ 4 ದೂರು ದಾಖಲಾಗಿದೆ. ಅವರ ಹಣಕಾಸು ಹಾಗೂ ಚಿನ್ನದ ವ್ಯವಹಾರದಲ್ಲಿ ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದರಿಂದಾಗಿ ಇಂದು ಐಶ್ವರ್ಯಗೌಡ ರಾಜ್ಯ ಮಟ್ಟದಲ್ಲಿ ಅನ್ಯಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ದೂರಿದರು.