ಮೊಬೈಲ್ ಬೆಳಕಲ್ಲಿ ಚಿಕಿತ್ಸೆ ಪ್ರಕರಣ ತನಿಯಾಗಲಿ: ರೈತಸಂಘ

| Published : May 28 2024, 01:10 AM IST

ಮೊಬೈಲ್ ಬೆಳಕಲ್ಲಿ ಚಿಕಿತ್ಸೆ ಪ್ರಕರಣ ತನಿಯಾಗಲಿ: ರೈತಸಂಘ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡು ಮೊಬೈಲ್ ಬೆಳಕಲ್ಲಿ ಚಿಕಿತ್ಸೆ ನೀಡಿದ ಪ್ರಕರಣವನ್ನು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ರೈತಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು

ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡು ಮೊಬೈಲ್ ಬೆಳಕಲ್ಲಿ ಚಿಕಿತ್ಸೆ ನೀಡಿದ ಪ್ರಕರಣವನ್ನು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಆಸ್ಪತ್ರೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನಿವಾರಣೆಗಾಗಿ ಪ್ರತಿಭಟನೆ ನಡೆಸಿ 40 ಕ್ಕೂ ಹೆಚ್ಚಿನ ರೈತರು ಜೈಲು ಸೇರಿದ್ದ ಪರಿಣಾಮವಾಗಿ ಆಗಿನ ಆರೋಗ್ಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಅಂದಿನ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಶ್ರಮ ದಿಂದಾ ಗಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನೇಮಕ ಗೊಂಡು ಜನರಿಗೆ ಉತ್ತಮ ಸೇವೆ ಸಿಗುತ್ತಿತ್ತು, ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಆಸ್ಪತ್ರೆಯಲ್ಲಿ ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕುತ್ತಿಲ್ಲ, ಆಸ್ಪತ್ರೆಯಲ್ಲಿ ಜನರೇಟರ್ ಸಮಸ್ಯೆ ರಾಜಕೀಯ ಪ್ರೇರಿತವಾಗಿ ಸುದ್ದಿಯಾಗುತ್ತಿದೆ. ತಾಲೂಕಿನ ಅಭಿವೃದ್ಧಿ ಗಾಗಿ ಯೋಚಿಸ ಬೇಕಾದ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಿಂದ ರಾಜಕೀಯ ಕೆಸರೆರಚಾಟ ನಡೆಸುತ್ತಿರುವುದು ಖಂಡನೀಯ. ಹಿಂದುಳಿದ ತಾಲೂಕಿನ ಕೇಂದ್ರ ಸ್ಥಾನದಲ್ಲಿರುವ ಆಸ್ಪತ್ರೆ ವಿಚಾರವಾಗಿ ರಾಜಕೀಯ ಬೆರಸದೆ ಅಗತ್ಯ ಸೌಲಭ್ಯಗಳ ಕಲ್ಪಿಸುವತ್ತ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಬಿಜೆಪಿ ಅಧಿಕಾರದ ಅವಧಿಯುಲ್ಲಿ ಆಸ್ಪತ್ರೆಯಲ್ಲಿ ಕೆಲವೇ ವರ್ಷಗಳ ಹಿಂದೆ ನೆಲಕ್ಕೆ ಹಾಕಿದ್ದ ಬಂಡೆಗಳು ಉತ್ತಮ ಗುಣಮಟ್ಟ ಹೊಂದಿದ್ದರೂ ಗುತ್ತಿಗೆದಾರನೊಬ್ಬ ಪ್ರಭಾವ ಬಳಸಿಕೊಂಡು ಬಂಡೆಗಳನ್ನು ಕಿತ್ತು ಹೊಸ ಬಂಡೆಗಳನ್ನು ಹಾಕಿ ಮಾಡಿದ ಕೆಲಸಕ್ಕೆ ಮತ್ತೊಮ್ಮೆ ಕಾಮಗಾರಿ ಮಾಡಿ ಸರ್ಕಾರದ ಹಣವನ್ನು ಪೋಲು ಮಾಡಿದರು. ಬಿಜೆಪಿ ಯವರು ಎಂದೂ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಮಾತನಾಡಲಿಲ್ಲ. ರೈತರು ಜೈಲಿಗೆ ಹೋದರೂ ಸೌಜನ್ಯಕ್ಕೂ ಮಾತನಾಡಿಸಲಿಲ್ಲ. ಇಂಥವರು ಆಸ್ಪತ್ರೆಯ ಸಮಸ್ಯೆಗಳ ಕುರಿತು ರಾಜಕೀಯ ಮಾಡುತ್ತಿರುವುದು ಜತೆಗೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ದೂರದ ನಗರಗಳ ಕಡೆ ಹೋಗುವಂತಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಆಸ್ಪತ್ರೆಯಲ್ಲಿ ಸಿಬ್ಬಂದಿ ನೇಮಕ ಮಾಡುವ ಜತೆಗೆ ಜನರೇಟರ್ ಕೆಟ್ಟು ದುರಸ್ತಿ ಯಾಗದೆ ಸಮಸ್ಯೆಗೆ ಅಲ್ಲಿನ ಆಡಳಿತ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ.ಕೂಡಲೇ ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ. ತಾಲೂಕು ಅಧ್ಯಕ್ಷ ಮಂಜಣ್ಣ, ಎಸ್.ಟಿ.ಚಂದ್ರಣ್ಣ, ಕನಕ ಶಿವಮೂರ್ತಿ, ಮೇಸ್ತ್ರಿ ಪಾಪಯ್ಯ, ಡಿ.ಕೃಷ್ಣ ಮೂರ್ತಿ, ಸಣ್ಣಪ್ಪಯ್ಯ, ಈರಣ್ಣ, ಬೆಳಗಲ್ ಗುರುಮೂರ್ತಿ, ಗೌತಮ್, ಸಿಪಿಐಎಂ ದಾನಸೂರಯ್ಯ, ಕಾಮಯ್ಯ ಇದ್ದರು.