ಸಾರಾಂಶ
ಇಡೀ ದೇಶದಲ್ಲೇ ಇದೊಂದು ವಿನೂತನ ಯೋಜನೆಯಾಗಿದ್ದು, ಹತ್ತಾರು ಕಾರ್ಮಿಕರು ಇರುವ ಸ್ಥಳದಲ್ಲಿಯೇ ಈ ಘಟಕ ತೆರಳಿ ಅವರ ಆರೋಗ್ಯ ತಪಾಸಣೆ ಮಾಡಲಿದೆ. ಗಂಭೀರ ಸ್ವರೂಪದ ರೋಗಗಳಿದ್ದರೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯೂ ಇದೇ ವೈದ್ಯಕೀಯ ಘಟಕದ್ದು.
ಬಸವರಾಜ ಹಿರೇಮಠ
ಧಾರವಾಡ:ಕಾರ್ಮಿಕರಿಗೆ ತುರ್ತು ಆರೋಗ್ಯ ವ್ಯವಸ್ಥೆ ಒದಗಿಸುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಸಂಚಾರಿ ವೈದ್ಯಕೀಯ ಘಟಕ ತೆರೆಯುತ್ತಿದೆ.
ರಸ್ತೆ ಅಪಘಾತ, ಗರ್ಭಿಣಿ ಸೇರಿದಂತೆ ಎಲ್ಲ ರೀತಿಯ ರೋಗಿಗಳನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಒಯ್ಯಲು ರಾಜ್ಯದಲ್ಲಿ 108 ಹೆಸರಿನ ಆ್ಯಂಬುಲೆನ್ಸ್‌ಗಳಿವೆ. ಆದರೆ, ಈಗ ಕಾರ್ಮಿಕ ಮಂಡಳಿ ಮೂಲಕ ಆರಂಭವಾಗುತ್ತಿರುವ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹೊಂದಿರುವ ಸಂಚಾರಿ ವೈದ್ಯಕೀಯ ವಾಹನಗಳು ವಿಶೇಷವಾಗಿ ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲ ರೀತಿಯ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಅತ್ಯಂತ ಸಹಾಯಕಾರಿಯಾಗಿವೆ.ಏತಕ್ಕಾಗಿ ಈ ಯೋಜನೆ?
ಸಮಾಜದ ವಿವಿಧ ವರ್ಗಗಳ ಪೈಕಿ ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲ ರೀತಿಯ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಇನ್ನೇನು ಗಂಭೀರ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸುವ ಸಾಧ್ಯತೆಗಳಿವೆ. ಜತೆಗೆ ಕೆಲಸದ ಸಂದರ್ಭದಲ್ಲಿ ಅನಾಹುತಗಳಾಗುವ ಸಂಭವವೂ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣದಲ್ಲಿಯೇ ಅವರಿಗೆ ಚಿಕಿತ್ಸೆ ನೀಡಿ ಮುಂದಿನ ಹಂತದಲ್ಲಿ ಆಸ್ಪತ್ರೆ ದಾಖಲು ಮಾಡಲು ಈ ವಾಹನಗಳು ಕಾರ್ಯನಿರ್ವಹಿಸಲಿವೆ.ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಈ ಯೋಜನೆ ಜಾರಿಯಾಗಲಿದ್ದು, ಇಡೀ ರಾಜ್ಯಕ್ಕೆ 100 ವಾಹನಗಳನ್ನು ಮಂಡಳಿ ಒದಗಿಸಲಿದೆ. ತಕ್ಷಣದ ಚಿಕಿತ್ಸೆಯ ಅಗತ್ಯವಿರುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೊದಲು ಈ ವಾಹನಗಳು ಕಾರ್ಮಿಕರಿಗೆ ಚಿಕಿತ್ಸೆ ನೀಡಲಿವೆ ಎಂದು ಪತ್ರಿಕೆಗೆ ಮಾಹಿತಿ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಧಾರವಾಡದಲ್ಲಿ ಮೊದಲ ಹಂತದಲ್ಲಿ 30 ಸಂಚಾರಿ ವೈದ್ಯಕೀಯ ಘಟಕ (ಎಂಎಂಯು) ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಇಡೀ ದೇಶದಲ್ಲೇ ಇದೊಂದು ವಿನೂತನ ಯೋಜನೆಯಾಗಿದ್ದು, ಹತ್ತಾರು ಕಾರ್ಮಿಕರು ಇರುವ ಸ್ಥಳದಲ್ಲಿಯೇ ಈ ಘಟಕ ತೆರಳಿ ಅವರ ಆರೋಗ್ಯ ತಪಾಸಣೆ ಮಾಡಲಿದೆ. ಗಂಭೀರ ಸ್ವರೂಪದ ರೋಗಗಳಿದ್ದರೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯೂ ಇದೇ ವೈದ್ಯಕೀಯ ಘಟಕದ್ದು. ಬೆಂಗಳೂರಿನಂತಹ ದೊಡ್ಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಘಟಕಗಳ ಬೇಡಿಕೆ ಇದ್ದು, ಪ್ರತಿ ಜಿಲ್ಲೆಗೆ ಒಂದೆರೆಡು ವಾಹನಗಳು ಲಭ್ಯ ಆಗಿವೆ. ವಾಹನದಲ್ಲಿ ವಿದ್ಯುನ್ಮಾನ ಆರೋಗ್ಯ ವ್ಯವಸ್ಥೆ ಇದ್ದು, ರೋಗಿಯು ಈ ಘಟಕಕ್ಕೆ ಪ್ರವೇಶಿಸಿದ ನಂತರ ಆತನ ಎಲ್ಲಾ ಆರೋಗ್ಯ ಚಟುವಟಿಕೆಯನ್ನು ದಾಖಲಿಸುತ್ತದೆ. ಒಟ್ಟಾರೆ ಯೋಜನೆಗೆ ₹ 127 ಕೋಟಿ ವೆಚ್ಚವಾಗುತ್ತಿದೆ ಎಂದರು.ಏನೇನು ಸೌಲಭ್ಯ?
ರಕ್ತದೊತ್ತಡ ಮಾನಿಟರ್, ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಸ್ಟೆತೊಸ್ಕೋಪ್, ಇಸಿಜಿ ಸಾಧನ, ಹೆಲ್ತ್ ಪ್ಯಾಡ್, ಮೂತ್ರ ವಿಶ್ಲೇಷಕ ಮತ್ತು ಮುಂತಾದ ಅತ್ಯಾಧುನಿಕ ಸಾಧನಗಳನ್ನು ಹೊಂದಿರುತ್ತದೆ. ಪ್ರತಿ ಘಟಕವು ಎಂಬಿಬಿಎಸ್ ವೈದ್ಯರ ತಂಡವನ್ನು ಹೊಂದಿದ್ದರೆ, ಅಲ್ಲಿ ಮೂತ್ರ ಪರೀಕ್ಷೆ, ತೂಕ, ಎತ್ತರ, ಬಿಪಿ, ನಾಡಿ, ತಾಪಮಾನ, ಬಿಎಂಐ, ಡೇಂಘಿ, ಚಿಕೂನ್‌ಗುನ್ಯಾ, ಇಸಿಜಿ (ತತ್‌ಕ್ಷಣ ವರದಿ), ಮೂತ್ರಪಿಂಡದ ಕಾರ್ಯ ಪರೀಕ್ಷೆ, ಲಿಪಿಡ್ ಪರೀಕ್ಷೆ ಸೇರಿವೆ. ಗರ್ಭಧಾರಣೆಯ ಪರೀಕ್ಷೆಯೂ ನಡೆಯಲಿದ್ದು, ವಾಹನಗಳು ಜನವರಿ ಎರಡನೆ ವಾರದಿಂದ ಕಾರ್ಯಾರಂಭ ಮಾಡಲಿದ್ದು, ಕಾರ್ಮಿಕರು ಈ ವಾಹನಗಳ ಪ್ರಯೋಜನ ಪಡೆಯಬೇಕೆಂದು ಲಾಡ್ ೇಮನವಿ ಮಾಡಿದರು.