ಸಾರಾಂಶ
ಬೆಂಗಳೂರು : ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಹಿಂಬಾಲಿಸಿ ಮೊಬೈಲ್ ಫೋನ್ ಕಸಿಯುತ್ತಿದ್ದ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ಬಂಗಾರಗಿರಿನಗರ ನಿವಾಸಿ ಮೊಯಿನ್ ಖಾನ್(20) ಬಂಧಿತ. ಆರೋಪಿಯಿಂದ ₹75 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಗೋವಿಂದಪುರ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ವ್ಯಕ್ತಿ, ಏಕಾಏಕಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.+++ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಸಹ ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಸುಲಿಗೆ ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಗೆ ಬಂದ ಬಳಿಕ ತನ್ನ ಕಳವು ಚಾಳಿ ಮುಂದುವರೆಸಿದ್ದ. ಈತನ ಬಂಧನದಿಂದ ಗೋವಿಂದಪುರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಮೊಬೈಲ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.