ಕೇಂದ್ರ ಸರ್ಕಾರವು 2023ರ ಫೆಬ್ರವರಿಯಲ್ಲಿ ಜಾರಿಗೆ ತಂದ CEIR(Central Equipment Identity Register) ತಂತ್ರಾಂಶವನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಗದಗ: ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಫೋನ್‌ಗಳು ಕಳೆದುಹೋದರೆ ಅಥವಾ ಕಳ್ಳತನವಾದರೆ ಅವು ಮರಳಿ ಸಿಗುವುದು ಅಸಾಧ್ಯ ಎಂಬ ಸಾರ್ವಜನಿಕರ ಆತಂಕಕ್ಕೆ ಗದಗ ಜಿಲ್ಲಾ ಪೊಲೀಸರು ಈಗ ಭರವಸೆಯ ಉತ್ತರ ನೀಡಿದ್ದಾರೆ.

ಜಿಲ್ಲಾದ್ಯಂತ ನಡೆಸಲಾದ ವಿಶೇಷ ಕಾರ್ಯಾಚರಣೆಯ ಫಲವಾಗಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಪತ್ತೆಹಚ್ಚಲಾದ 1.13 ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಇಲಾಖೆಯು ಜನಪರ ಕಾಳಜಿಯನ್ನು ಮೆರೆದಿದೆ.

ಪರಿಣಾಮಕಾರಿ ಅನುಷ್ಠಾನ: ​ಕೇಂದ್ರ ಸರ್ಕಾರವು 2023ರ ಫೆಬ್ರವರಿಯಲ್ಲಿ ಜಾರಿಗೆ ತಂದ CEIR(Central Equipment Identity Register) ತಂತ್ರಾಂಶವನ್ನು ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸಾರ್ವಜನಿಕರು ದೂರು ನೀಡಲು ಕಾಯದೆ, ಇಲಾಖೆಯೇ ಸ್ವತಃ ಆಸಕ್ತಿ ವಹಿಸಿ ಮೊಬೈಲ್ ಪತ್ತೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಈ ಯಶಸ್ಸಿನ ಹಿಂದಿನ ರಹಸ್ಯವಾಗಿದೆ.

ಈ ತಂತ್ರಜ್ಞಾವನ್ನು ಬಳಸಿಕೊಂಡು ಪ್ರಸಕ್ತ ಜ. 1ರಿಂದ ಈವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದುಹೋಗಿದ್ದ ಅತಿ ಹೆಚ್ಚು ಮೌಲ್ಯದ ಮೊಬೈಲ್‌ಗಳನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡಿ ಜಪ್ತಿ ಮಾಡಲಾಗಿದೆ.

​ಈ ಬೃಹತ್ ಕಾರ್ಯಾಚರಣೆಯ ಯಶಸ್ಸಿನ ಹಿಂದೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ತಳಮಟ್ಟದ ಸಿಬ್ಬಂದಿ ಶ್ರಮ ಅಡಗಿದೆ.

ಸರ್ವರ ಶ್ರಮವಿದೆ: ಜಿಲ್ಲೆಯ ಎಲ್ಲ ಡಿಎಸ್ಪಿ, ಸಿಪಿಐ, ಪಿಎಸ್ಐ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಹಗಲಿರುಳು ಶ್ರಮಿಸಿದ್ದು, ವಿಶೇಷವಾಗಿ ತಾಂತ್ರಿಕ ವಿಭಾಗದ ಎಎಸ್ಐ ಗುರುರಾಜ ಬೂದಿಹಾಳ ಮತ್ತು ಸಂಜೀವ ಕೊರಡೂರ ಅವರ ತಂಡವು ತಾಂತ್ರಿಕ ನೈಪುಣ್ಯತೆಯ ಮೂಲಕ ಮೊಬೈಲ್‌ಗಳ ನಿಖರ ಸ್ಥಳವನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಬಹುಮಾನ ಘೋಷಣೆ: ಅಮೂಲ್ಯವಾದ ಮೊಬೈಲ್ ಮತ್ತು ಅದರಲ್ಲಿನ ದತ್ತಾಂಶವನ್ನು ಮರಳಿ ಪಡೆದ ಸಾರ್ವಜನಿಕರ ಮುಖದಲ್ಲಿ ನೆಮ್ಮದಿಯ ನಗು ಕಂಡುಬಂದಿದೆ. ಕರ್ತವ್ಯದ ಬಗ್ಗೆ ಅದಮ್ಯ ನಿಷ್ಠೆ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ಎಸ್‌ಪಿ ರೋಹನ ಜಗದೀಶ ಮುಕ್ತ ಕಂಠದಿಂದ ಶ್ಲಾಘಿಸಿದ್ದು. ಉತ್ತಮ ಸಾಧನೆ ಮಾಡಿದ ಇಡೀ ತಂಡಕ್ಕೆ ವಿಶೇಷ ನಗದು ಬಹುಮಾನ ಮತ್ತು ಪ್ರಶಸ್ತಿಯನ್ನು ಘೋಷಿಸಿದ್ದಾರೆ.ಮೊಬೈಲ್ ಕಳೆದುಹೋದರೆ ತಕ್ಷಣ ಸಿಇಐಆರ್ ಪೋರ್ಟಲ್‌ನಲ್ಲಿ ನೋಂದಾಯಿಸಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಪೊಲೀಸ್ ಇಲಾಖೆ ನಿಮ್ಮ ಆಸ್ತಿಯ ರಕ್ಷಣೆಗೆ ಇಲಾಖೆ ಸದಾ ಸಿದ್ಧವಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.