ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ದೃಷ್ಟಿ ದೇವರು ನೀಡಿದ ಅಮೂಲ್ಯ ಕೊಡುಗೆ. ಆದರೆ ಇಂದಿನ ಜೀವನ ಶೈಲಿ ನಮ್ಮ ಕಣ್ಣುಗಳನ್ನು ಅತೀ ಚಿಕ್ಕ ವಯಸ್ಸಿಗೆ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತಿದೆ. ಕೆಲಸದ ಒತ್ತಡ ಸೇರಿದಂತೆ ಮನೋರಂಜನೆಗಾಗಿ ಬಳಸಲಾಗುತ್ತಿರುವ ಟಿವಿ, ಮೊಬೈಲ್, ಕಂಪ್ಯೂಟರ್‌ಗಳಂತಹ ಆಧುನಿಕ ಉಪಕರಣಗಳು ಇಂದು ನಮ್ಮ ದೃಷ್ಟಿಯನ್ನು ಕಸಿದುಕೊಳ್ಳುತ್ತಿವೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಖೇದ ವ್ಯಕ್ತಪಡಿಸಿದರು.ಸ್ನೇಹ ಸದನ ಸಮಗ್ರ ಸಮಾಜಕಾರ್ಯ ನಿರ್ವಹಣಾ ಕೇಂದ್ರ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಎಸ್ ಜೆಜೆಎಂ ಸರ್ಕಾರಿ ಪದವಿ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಸೌಂದರ‍್ಯ ಆನಂದಿಸಲು ದೇವರು ನಮಗೆ ಕಣ್ಣು ನೀಡಿದ್ದಾನೆ. ಕಣ್ಣುಗಳಿಗೂ ವ್ಯಾಯಾಮ ಮತ್ತು ಅದರ ಸರಿಯಾದ ಕಾರ್ಯ ನಿರ್ವಹಣೆಗೆ ವಿಶ್ರಾಂತಿ ಬೇಕು ಎಂಬುದನ್ನು ಮರೆಯುತ್ತೇವೆ. ಕಣ್ಣುಗಳ ಆರೋಗ್ಯ ಮತ್ತು ಯೋಗ ಕ್ಷೇಮದ ಕುರಿತು ನಾವು ನಿಷ್ಕಾಳಜಿ ತೋರಬಾರದು. ದೇಹದಲ್ಲಿಯೇ ಅತ್ಯಂತ ಸೂಕ್ಷ್ಮವಾದ ಅಂಗವಾಗಿರುವ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ತೋರುವಂತೆ ತಿಳಿಸಿದರು.ಶಂಕರ ಕಣ್ಣಿನ ಆಸ್ಪತ್ರೆಯ ಕಣ್ಣಿನ ತಜ್ಞ ವೈದ್ಯೆ ಕೃತಿಕಾ ಮಾತನಾಡಿ, ಮುದ್ರಣದಿಂದ ಬರುವಂತಹ ಸಣ್ಣ ಅಕ್ಷರಗಳನ್ನು ಕಷ್ಟಪಟ್ಟು ಓದುವುದನ್ನು ತಪ್ಪಿಸಬೇಕು, ಸ್ನಾನದ ಸಮಯದಲ್ಲಿ ಬಿಸಿ ನೀರನ್ನು ತಲೆಯ ಮೇಲೆ ಸುರಿದುಕೊಳ್ಳಬೇಡಿ, ಇದರಿಂದ ಕಣ್ಣಿನಲ್ಲಿರುವ ಶಕ್ತಿ ಕುಂಠಿತಗೊಳ್ಳಲಿದೆ. ಕನಿಷ್ಠ 10 ಅಡಿ ದೂರದಿಂದ ಟಿವಿ ವೀಕ್ಷಿಸಬೇಕು, ದೀರ್ಘಕಾಲದ ಕಂಪ್ಯೂಟರ್ ಬಳಕೆ ನಿಲ್ಲಿಸಬೇಕು, ಕಡಿಮೆ ಬೆಳಕು ಇರುವ ಕಡೆಯಲ್ಲಿ ಕುಳಿತು ಓದುವುದು ಕಣ್ಣಿನ ಆರೋಗ್ಯಕ್ಕೆ ಸರಿಯಾದ ಕ್ರಮಗಳಲ್ಲ ಎಂದ ಅವರು, ವಯೋಸಹಜ ಬರುವಂತಹ ಕಣ್ಣಿನ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಅಥವಾ ಉಚಿತ ಶಬಿರಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞ ಮಲ್ಲಿಕಾರ್ಜುನ ಮಾತನಾಡಿ, ವೈದ್ಯರು ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆಗಳನ್ನು ನೀಡುತ್ತಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಜನರಿಗೆ ಉಚಿತ ತಪಾಸಣೆ ಮಾಡುವುದಷ್ಟೇ ಅಲ್ಲ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿ ಅಂಧರ ಬದುಕಿನಲ್ಲಿ ಹೊಸಬೆಳಕನ್ನು ಮೂಡಿಸುತ್ತಿದ್ದಾರೆ. ಇದೆಲ್ಲದರ ಉಪಯೋಗವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಶಿಬಿರದಲ್ಲಿ ಸುಮಾರು 172 ಜನರು ಉಚಿತ ಚಿಕಿತ್ಸೆ ಪಡೆದು, 98 ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಎಸ್‌ಜೆಜೆಎಂ ಪದವಿ ಪೂರ್ವ ಮಹಾವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕ ಡಿ.ಬಿ. ಕುಸಗೂರ, ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ಸ್ನೇಹ ಸದನ ಸಂಸ್ಥೆಯ ವ್ಯವಸ್ಥಾಪಕಿ ರೂಪಾ, ನಿರ್ದೇಶಕಿ ಗ್ಲೋರಿಯಾ ತೆರೆಸಿಟಾ, ಸಂಯೋಜಕರಾದ ಸುವರ್ಣಾ, ಕಾವ್ಯ, ಸರಸ್ವತಿ, ಫಾತಿಮಾ, ಈರಣ್ಣ ಮಾಸಣಗಿ, ಅಚಲಾ ಇತರರಿದ್ದರು.