ಕನ್ನಡಪ್ರಭವಾರ್ತೆ ನಾಗಮಂಗಲ
ಒಂದು ದೂರವಾಣಿ ಕರೆ ಮಾಡಿದರೆ ರೈತರ ಮೊಬೈಲ್‌ಗೆ ಸಂದೇಶದ ಮೂಲಕ ಎಲ್ಲಾ ಮಾಹಿತಿ ಒದಗಿಸುವಂತಹ ಆಧುನಿಕ ತಂತ್ರಜ್ಞಾನ ಸೇರಿದಂತೆ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ದೇವಲಾಪುರದಲ್ಲಿ ೨ ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಹಾಗೂ ರೈತ ಉತ್ಪಾದಕ ಕಂಪನಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ರೈತರು ಬೆಳೆಯುವ ಉತ್ಪನ್ನಗಳಿಗೆ ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಸಿಗುತ್ತದೆ. ಜಮೀನಿನಲ್ಲಿ ಯಾವ ತಳಿ ಬಿತ್ತನೆ ಮಾಡಬೇಕು. ರೋಗಬಾಧಿತ ಬೆಳೆಗೆ ಎಷ್ಟು ಪ್ರಮಾಣದಲ್ಲಿ ಯಾವ ಔಷಧಿ ಗೊಬ್ಬರ ಬಳಸಬೇಕು ಎಂಬಿತ್ಯಾದಿ ಮಾಹಿತಿಯನ್ನು ರೈತರ ಮೊಬೈಲ್ ಸಂದೇಶದ ಮೂಲಕ ರವಾನಿಸುವ ತಂತ್ರಜ್ಞಾನಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದರು.
ಈ ಹಿಂದೆ ೪೦ ಲಕ್ಷ ರು.ವೆಚ್ಚದಲ್ಲಿ ಹೋಬಳಿ ರೈತ ಸಂಪರ್ಕ ಕೇಂದ್ರ ನಿರ್ಮಿಸಲಾಗುತ್ತಿತ್ತು. ನಾನು ಕೃಷಿ ಸಚಿವನಾದ ನಂತರ ೨ ಕೋಟಿ ರು.ಗೆ ಹೆಚ್ಚಿಸಿ ಮೇಲ್ದರ್ಜೆಗೇರಿಸಲಾಗುತ್ತಿದೆ. ೫ವರ್ಷದಲ್ಲಿ ೬ಸಾವಿರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದಷ್ಟು ಸಹಾಯಧನ ಕೊಟ್ಟಿವೆ. ನಾನು ಒಂದೇ ವರ್ಷದಲ್ಲಿ ೬ಸಾವಿರ ಸಂಸ್ಕರಣಾ ಘಟಕಗಳಿಗೆ ತಲಾ ರಾಜ್ಯ ಸರ್ಕಾರದಿಂದ ೯ಲಕ್ಷ ಕೇಂದ್ರ ಸರ್ಕಾರದಿಂದ ೬ಲಕ್ಷ ಸಹಾಯಧನ ಸಿಗುವಂತೆ ಮಾಡಿದ್ದೇನೆ. ರೈತ ಉತ್ಪಾದಕ ಕಂಪನಿಯಲ್ಲಿ ಉತ್ತಮ ವಹಿವಾಟು ನಡೆಸಿದರೆ ಐದರಿಂದ ಹತ್ತು ಮಂದಿಗೆ ಉದ್ಯೋಗ ಕೊಡಬಹುದು. ೬ಸಾವಿರ ಸಂಸ್ಕರಣಾ ಘಟಕಗಳಿಗೆ ತಲಾ ೧೫ಲಕ್ಷ ಸಹಾಯ ನೀಡುವ ಮೂಲಕ ಕನಿಷ್ಠ ೩೦ಸಾವಿರ ಮಂದಿಗೆ ಉದ್ಯೋಗ ನೀಡುವಂತಹ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ ಎಂದರು.ನಾನು ಎಷ್ಟು ವರ್ಷ ಕಾಲ ಅಧಿಕಾರದಲ್ಲಿರುತ್ತೇನೆ ಎನ್ನುವುದು ಮುಖ್ಯವಲ್ಲ. ಯಾವುದೂ ಶಾಶ್ವತವಲ್ಲ. ಅವಕಾಶ ಸಿಕ್ಕಾಗ ಜನರಿಗೆ ಅನುಕೂಲವಾಗುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬುದೇ ನನ್ನ ಮುಖ್ಯ ಉದ್ದೇಶ. ಅದಕ್ಕಾಗಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜನರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.
ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಮಾತನಾಡಿದರು.
ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಭೂಸಾರ ಸಂರಕ್ಷಣೆಯ ಜಂಟಿ ನಿರ್ದೇಶಕ ಜಯಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ, ಕೆಆರ್‌ಐಡಿಎಲ್‌ನ ಇಇ ಸೋಮಶೇಖರ್, ಎಇಇ ಚೈತ್ರ, ಮುಖಂಡರಾದ ಮಾವಿನಕೆರೆ ಸುರೇಶ್, ಉದಯಕಿರಣ್, ನಂದಿರಮೇಶ್, ಡಿ.ಕೆ.ಸುರೇಶ್, ನರಸಿಂಹಮೂರ್ತಿ, ಮರಿಸ್ವಾಮಿ, ಅಪ್ಪಾಜಿ, ಪ್ರಭಾಕರ್ ಸೇರಿದಂತೆ ಹಲವರು ಇದ್ದರು.