ಹೆಜ್ಜೆ ಕುಣಿತ, ರಿವಾಯಿತಿ ಪದ, ಕಡಬಡ ಸೋಗು, ಫಕೀರರ ವೇಷ, ಹುಲಿವೇಷದಂತಹ ಅನೇಕ ಜನಪದ ಕಲೆಗಳು ಕೇವಲ ಮನರಂಜನೆಗಾಗಿ ಹುಟ್ಟಿದವುಗಳಲ್ಲ
ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಒಂದು ಕಾಲದಲ್ಲಿ ಮೊಹರಂ ಹಬ್ಬ ಬಂತೆಂದರೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ವಿಶಿಷ್ಟ ಸಡಗರ ಸಂಭ್ರಮ ಮನೆ ಮಾಡುತ್ತಿತ್ತು. ಸಂಜೆಯಾಗುತ್ತಿದ್ದಂತೆ ಊರಿನ ಓಣಿಗಳಲ್ಲಿ ಚರ್ಮದ ಹಲಗೆ ನಾದ ಮೊಳಗುತ್ತಿತ್ತು. ಕಾಲಿಗೆ ಗೆಜ್ಜೆ ಕಟ್ಟಿಕೊಂಡ ಯುವಕರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. ಹಿರಿಯರು ರಿವಾಯಿತಿ ಪದ ಹಾಡುತ್ತಿದ್ದರೆ, ಕಿರಿಯರು ಅವರ ಹಿಂದೆ ಸ್ವರ ಸೇರಿಸುತ್ತಿದ್ದರು. ಕಡಬಡ ಸೋಗು, ಫಕೀರರ ವೇಷ, ಹುಲಿವೇಷ, ಅಲಾಯಿ ದೇವರ ಸವಾರಿ, ಪಂಜಾ ಮೆರವಣಿಗೆ ಇವೆಲ್ಲವೂ ಸೇರಿ ಮೊಹರಂ ಕೇವಲ ಧಾರ್ಮಿಕ ಆಚರಣೆಯಾಗಿರದೆ ಜನಪದ ಸಂಸ್ಕೃತಿಯ ಮಹೋತ್ಸವವಾಗಿ ರೂಪುಗೊಳ್ಳುತ್ತಿತ್ತು.ಆದರೆ, ಈಗ ಕಾಲ ಬದಲಾಗಿದ್ದು, ಇಂದು ಹಲಗೆಯ ನಾದಕ್ಕಿಂತ ಡಿಜೆ ಸದ್ದು ಹೆಚ್ಚಾಗಿದೆ. ಗೆಜ್ಜೆಯ ಝೇಂಕಾರಕ್ಕಿಂತ ಮೊಬೈಲ್‌ಗಳ ಪರದೆ ಯುವಜನತೆಯನ್ನು ಹೆಚ್ಚು ಸೆಳೆಯುತ್ತಿದೆ. ಹಿರಿಯರು ಹಾಡುತ್ತಿದ್ದ ರಿವಾಯಿತಿ ಪದಗಳು ನಿಧಾನವಾಗಿ ಮೌನವಾಗುತ್ತಿವೆ. ಶತಮಾನಗಳ ಇತಿಹಾಸ ಹೊಂದಿರುವ ಜನಪದ ಕಲೆಗಳು ನಮ್ಮ ಕಣ್ಣೆದುರೇ ಕಣ್ಮರೆಯ ಹಂತ ತಲುಪಿವೆ. ಮೊಹರಂ ಹಬ್ಬ ಸರ್ವಧರ್ಮ ಸಮನ್ವಯದ ಜೀವಂತ ಸಂಕೇತ ಎಲ್ಲ ಸಮುದಾಯದ ಜನರು ಅಲಾಯಿ ದೇವರಿಗೆ ಹರಕೆ ಹೊತ್ತು ಭಕ್ತಿಯಿಂದ ಆಚರಿಸುವ ಹಬ್ಬ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಸಾಮಾಜಿಕ ಸಾಮರಸ್ಯದ ಪ್ರತೀಕವೂ ಆಗಿದೆ.
ಹೆಜ್ಜೆ ಕುಣಿತ, ರಿವಾಯಿತಿ ಪದ, ಕಡಬಡ ಸೋಗು, ಫಕೀರರ ವೇಷ, ಹುಲಿವೇಷದಂತಹ ಅನೇಕ ಜನಪದ ಕಲೆಗಳು ಕೇವಲ ಮನರಂಜನೆಗಾಗಿ ಹುಟ್ಟಿದವುಗಳಲ್ಲ. ಅವು ಗ್ರಾಮೀಣ ಸಮಾಜ ಒಗ್ಗೂಡಿಸಿದ ಸಾಂಸ್ಕೃತಿಕ ಸೇತುವೆಗಳಾಗಿದ್ದವು. ಜಾತಿ-ಧರ್ಮ ಭೇದವಿಲ್ಲದೆ ಎಲ್ಲರನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸಿದ ಜನಪದ ಸಂಸ್ಕೃತಿಯ ಶ್ರೇಷ್ಠ ಮಾದರಿಗಳಾಗಿದ್ದವು.ಇತಿಹಾಸ ಹೇಳುವ ಪದ: ರಿವಾಯಿತಿ ಪದಗಳು ಉತ್ತರ ಕರ್ನಾಟಕದ ಮೌಖಿಕ ಸಾಹಿತ್ಯದ ಅಮೂಲ್ಯ ಸಂಪತ್ತಾಗಿವೆ. ಮಹಮ್ಮದ್ ಪೈಗಂಬರ, ಇಮಾಮ್ ಹಸನ್, ಇಮಾಮ್ ಹುಸೇನ್ ಅವರ ತ್ಯಾಗ, ಸತ್ಯ, ನ್ಯಾಯ, ಧರ್ಮದ ಸಂದೇಶ ಸರಳ ಜನಭಾಷೆಯ ಹಾಡಿನ ರೂಪದಲ್ಲಿ ತಲೆಮಾರುಗಳಿಂದ ತಲೆಮಾರಿಗೆ ತಲುಪಿಸುತ್ತಿದ್ದವು. ಪುಸ್ತಕಗಳು ಜನರಿಗೆ ಸುಲಭವಾಗಿ ಲಭ್ಯವಿಲ್ಲದ ಕಾಲದಲ್ಲಿ ಈ ಹಾಡುಗಳು ಇತಿಹಾಸದ ಪಾಠಗಳಾಗಿದ್ದವು. ಆದರೆ ಇಂದು ಪರಂಪರೆ ಮರೆಯಾಗುತ್ತಿದೆ.
ಹಬ್ಬಕ್ಕೆ ಹದಿನೈದು-ಇಪ್ಪತ್ತು ದಿನಗಳ ಮೊದಲೇ ಪ್ರತಿ ಗ್ರಾಮದಲ್ಲೂ ಹೆಜ್ಜೆ ಮೇಳದ ಅಭ್ಯಾಸ ಆರಂಭವಾಗುತ್ತಿತ್ತು, ಯುವಕರು ಹಲಗೆ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರು. ಮಸೀದಿ ಮುಂಭಾಗದಲ್ಲಿ ನಡೆಯುತ್ತಿದ್ದ ಹೆಜ್ಜೆ ಕುಣಿತ ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸುತ್ತಿದ್ದರು ಆದರೆ ಇಂದು ಆ ದೃಶ್ಯಗಳು ಅಪರೂಪವಾಗಿವೆ. ಬಹುತೇಕ ಪಟ್ಟಣ, ಗ್ರಾಮಗಳಲ್ಲಿ ಹೆಜ್ಜೆ ಮೇಳಗಳು ಇಲ್ಲದಂತಾಗಿದೆ. ಉಳಿದಿರುವ ಕೆಲ ತಂಡಗಳು ಹೊಸ ಸದಸ್ಯರ ಕೊರತೆಯಿಂದ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿವೆ.ಹುಲಿವೇಷಕ್ಕೂ ಅದೇ ಗತಿ: ಮೊಹರಂ ಸಂದರ್ಭದಲ್ಲಿ ಹರಕೆ ಹೊತ್ತು ಕಡಬಡ ಸೋಗು ಧರಿಸುವುದು, ಫಕೀರರಾಗಿ ಊರೂರು ಸುತ್ತುವುದು, ಹುಲಿವೇಷ ತೊಟ್ಟು ಸೇವೆ ಸಲ್ಲಿಸುವುದು ಭಕ್ತಿ ಮತ್ತು ನಂಬಿಕೆ ಪ್ರತೀಕವಾಗಿತ್ತು. ಈ ಹಿಂದೆ ಹಣದ ಕೊರತೆಯಿದ್ದರೂ ಭಕ್ತರು ಮೈಗೆ ಮಸಿ ಬಳಿದು, ಸರಳ ವೇಷಭೂಷಣದಲ್ಲಿ ಆಚರಣೆ ಪಾಲಿಸುತ್ತಿದ್ದರು ಪ್ರದರ್ಶನ ಮುಖ್ಯವಾಗಿರಲಿಲ್ಲ ಭಕ್ತಿ ಮುಖ್ಯವಾಗಿತ್ತು. ಆದರೆ ಇಂದು ಆಚರಣೆ ಕಡಿಮೆಯಾಗುತ್ತಿದೆ.
ಜನಪದ ಕಲೆ ಉಳಿಸುವಲ್ಲಿ ಕಲಾವಿದರು, ಸಮಾಜ ಮತ್ತು ಸರ್ಕಾರದ ಕರ್ತವ್ಯವಾಗಿದೆ, ಶಾಲಾ-ಕಾಲೇಜುಗಳಲ್ಲಿ ಜನಪದ ಕಲಾ ಪರಿಚಯ ಕಾರ್ಯಕ್ರಮ ನಡೆಸಬೇಕು. ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆ ಆಯೋಜಿಸಬೇಕು. ಉಚಿತ ತರಬೇತಿ ಶಿಬಿರ, ಕಲಾವಿದರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಜನಪದ ಕಲೆ ಸಾಂಸ್ಕೃತಿಕ ಪರಂಪರೆಯಾಗಿ ದಾಖಲಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಜನಪದ ಕಲೆಗಳ ಪರಂಪರೆ ಮುಂದಿನ ಪೀಳಿಗೆಗೆ ಉಳಿಸಿ ಕೊಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಮೊಹರಂ ಹಬ್ಬ ಹಿಂದೂ-ಮುಸ್ಲಿಂ ಸಾಮರಸ್ಯ ಸಾರುವ ಅಪರೂಪದ ಸಾಂಸ್ಕೃತಿಕ ಹಬ್ಬ, ಇದು ಗ್ರಾಮೀಣ ಬದುಕಿನ ಸೊಗಡು, ಜನಪದ ಸಂಸ್ಕೃತಿ, ಸಹಬಾಳ್ವೆಯ ಮೌಲ್ಯ ಹೊತ್ತಿರುವ ಬಹುರೂಪಿ ಉತ್ಸವವಾಗಿದೆ. ರಿವಾಯಿತಿ ಪದ, ಹೆಜ್ಜೆ ಕುಣಿತ, ಕಡಬಡ ಸೋಗು ಅನೇಕ ಜಾನಪದ ಈ ಹಬ್ಬದ ಜೀವಾಳವಾಗಿವೆ. ಆಧುನಿಕತೆ ಪ್ರಭಾವಕ್ಕೊಳಗಾದ ಯುವಜನರು ಕಲೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ತಲೆಮಾರುಗಳಿಂದ ಉಳಿಸಿಕೊಂಡು ಬಂದ ಜಾನಪದ ಕಲೆಗಳು ಕ್ರಮೇಣ ಕ್ಷೀಣಿಸುತ್ತಿದ್ದು ಜನಪದ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ವಾಲಿಕಾರ ತಿಳಿಸಿದ್ದಾರೆ.