ಹಫ್ತಾ ವಸೂಲಿ ಮಾಡುವ ಮೋದಿ ಸರ್ಕಾರ: ಎಲ್.ಹನುಮಂತಯ್ಯ ಆರೋಪ

| Published : Apr 21 2024, 02:18 AM IST

ಹಫ್ತಾ ವಸೂಲಿ ಮಾಡುವ ಮೋದಿ ಸರ್ಕಾರ: ಎಲ್.ಹನುಮಂತಯ್ಯ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

10 ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದ ಬಡವರ, ಆದಿವಾಸಿಗಳ, ದಲಿತರ ಪರವಾದ ಒಂದೇ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಕೊಟ್ಟಿಲ್ಲ. ಎಲೆಕ್ಟ್ರೋಲ್ ಬಾಂಡ್ ಎಂಬ ಜಗತ್ತಿನ ದೊಡ್ಡ ಹಗರಣ ನಡೆಸಿದೆ ಎಂದು ಎಲ್.ಹನುಮಂತಯ್ಯ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಐಟಿ, ಇಡಿ, ಸಿಬಿಐನಂತಹ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೋದಿ ಸರ್ಕಾರ ಕೋಟ್ಯಂತರ ರು.ಗಳ ಹಫ್ತಾ ವಸೂಲಿ ಮಾಡುವ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 10 ವರ್ಷಗಳಲ್ಲಿ ಮೋದಿ ಸರ್ಕಾರ ಈ ದೇಶದ ಬಡವರ, ಆದಿವಾಸಿಗಳ, ದಲಿತರ ಪರವಾದ ಒಂದೇ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಕೊಟ್ಟಿಲ್ಲ. ಎಲೆಕ್ಟ್ರೋಲ್ ಬಾಂಡ್ ಜಗತ್ತಿನ ದೊಡ್ಡ ಹಗರಣ ನಡೆಸಿದೆ ಎಂದು ಆರೋಪಿಸಿದರಲ್ಲದೆ, ಬಂಗಾರಪ್ಪ ಈ ನಾಡು ಕಂಡ ಅಪ್ರತಿಮ ನಾಯಕ, ಅವರು ಕೊಟ್ಟ ಯೋಜನಗೆಳು ಬಡವರು, ದಲಿತರು, ಹಿಂದುಳಿದ ವರ್ಗಗಳ ಪಾಲಿಗೆ ವರದಾನ ಆಗಿದ್ದವರು. ಅಂತಹ ನಾಯಕರ ಮಗಳು ಗೀತಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಬೇಕು ಎಂದು ಹೇಳಿದರು.

ಬಡವರ ಬದುಕಿಗೆ ಭದ್ರತೆ ನೀಡದ ಬಿಜೆಪಿ ಅತ್ಯಂತ ಕ್ರೂರ ಸರ್ಕರವಾಗಿದೆ. ಬಿಜೆಪಿ ಬಡವರ ಬದುಕಿಗೆ ಬೆಲೆ ನೀಡುವುದಿಲ್ಲ. ಶ್ರೀಮಂತರನ್ನು ಸಾಕುವ ಆಶ್ರಯ ತಾಣವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಶ್ರೀಮಂತರೇ ಶ್ರೀಮಂತರಾಗುತ್ತ ಹೋಗುತ್ತಿದ್ದಾರೆ. ಬಹುಸಂಖ್ಯಾತರ ಪರವಾಗಿ ಬಿಜೆಪಿ ಸರ್ಕಾರ ಇಲ್ಲ ಎಂದು ದೂರಿದರು. ಆರ್ಥಿಕತೆಯ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ ಕೆಳವರ್ಗದವರ ಸಂಪತ್ತು ಎಷ್ಟಿದೆ ಎಂದು ತಿಳಿದುಕೊಳ್ಳಲು ಆದಾಯ ಅಸಮಾನತೆ ಬಗ್ಗೆ ಮಾತನಾಡಲಿ. ಬಿಜೆಪಿ ಹತ್ತು ವರ್ಷಗಳ ತನ್ನ ಆಡಳಿತದ ಸಾಧನೆಯ ದಾಖಲೆ ಬಿಡುಗಡೆ ಮಾಡಲಿ. ನರೇಗಾ, ಆಹಾರ ಹಕ್ಕು ಅಧಿನಿಯಮ, ಅರಣ್ಯ ಹಕ್ಕು ಅಧಿನಿಯಮದಂತಹ ಜನಪರ ಕಾಯ್ದೆಗಳನ್ನು ಯುಪಿಎ ಸರ್ಕಾರ ತಂದಿತ್ತು. ಇಂತಹ ಒಂದೇ ಒಂದು ಕಾಯ್ದೆ ಮೋದಿ ತಂದಿದ್ದಾರೆಯೇ? ಈಗ ಬಿಡುಗಡೆ ಮಾಡಿರುವ ಪ್ರನಾಳಿಕೆಯಲ್ಲಿ ಜನಸಾಮಾನ್ಯರ ಪರವಾಗಿ ಒಂದಾದರೂ ಕಾರ್ಯಕ್ರಮಗಳಿವೇಯೇ? ದೇಶದಲ್ಲಿ ಆರ್ಥಿಕ ಅಸಮಾನತೆ ಎದ್ದುಕಾಣುತ್ತಿದೆ. ಮೋದಿ ಅವರ ಆರ್ಥಿಕ ನೀತಿ ಶ್ರೀಮಂತರ ಪರವಾಗಿದೆ ಎಂದು ಲೇವಡಿ ಮಾಡಿದರು.

ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ಅವರು ಹೇಳುತ್ತಿರುವಾಗಲೇ ಅತ್ತ ಉತ್ತರ ಭಾರತದಲ್ಲಿ ಅವರದ್ದೇ ಪಕ್ಷದ ಅಭ್ಯರ್ಥಿಯೊಬ್ಬರು ಬಿಜೆಪಿಗೆ ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಅವರ ವಿರುದ್ಧ ಯಾಕೆ ಮೋದಿ ಕ್ರಮ ಕೈಗೊಳ್ಳುವುದಿಲ್ಲ ಯಾಕೆ? ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುವ ಬದ್ಧತೆ ತೋರಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಒಮ್ಮೆಯೂ ಸಂಪೂರ್ಣವಾಗಿ ಬಹುಮತ ಪಡೆದು ಸರ್ಕಾರ ರಚಿಸಲಿಲ್ಲ. ಶಾಸಕರನ್ನು ಕೊಂಡುಕೊಂಡು ಸರ್ಕಾರವನ್ನು ರಚಿಸುತ್ತ ಬಂದಿದೆ. ಈಗಲೂ ಅಂತಹ ಸಂದರ್ಭ ಬಂದರೆ ಅದು ಹಿಂದೆ ಮುಂದೆ ನೋಡುವುದಿಲ್ಲ. ಆದರೆ, ಈ ಬಾರಿ ಅವರಿಗೆ 40ಕ್ಕೂ ಹೆಚ್ಚು ಶಾಸಕರು ಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತಾಗಿದೆ ಎಂದರು.

ಸಿದ್ದರಾಮಯ್ಯ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಇಂತಹ ನಾಯಕನನ್ನು ಎದುರಿಸಲು ಬಿಜೆಪಿಗಾಗಲಿ, ಮೋದಿಗಾಗಲಿ ಸಾಧ್ಯ ಆಗುವುದಿಲ್ಲ. ಸಿದ್ದರಾಮಯ್ಯನವರಂತಹ ಗಟ್ಟಿ ನಾಯರು ಇರುವವರೆಗೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳ ಮುಖ್ಯಮಂತ್ರಿಗಳನ್ನು, ಸಚಿವರನ್ನು ಜೈಲಿನಲ್ಲಿ ಇಡಲಾಗುತ್ತದೆ. ಪಾರದರ್ಶಕ, ಮತ್ತು ನಿರ್ಭೀತ ಚುನಾವಣೆ ನಡೆಯುತ್ತಿಲ್ಲ. ಇವಿಎಂ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿಪಕ್ಷಗಳ ಖಾತೆಗಳನ್ನು ರದ್ದುಗೊಳಿಸಲಾಗುತ್ತಿದೆ. ಮೋದಿ ಸರ್ಕಾರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಹಾಳುಗೆಡುವುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಮುಖಂಡರಾದ ಎಂ.ಶ್ರೀಕಾಂತ್, ಶಿವಣ್ಣ, ರಮೇಶ್ ಹೆಗ್ಡೆ, ಜಿ.ಡಿ ಮಂಜುನಾಥ್, ಎಲ್. ಪದ್ಮನಾಭ್, ಶಿವಾನಂದ ಮತ್ತಿರರರು ಉಪಸ್ಥಿತರಿದ್ದರು.