ಮೋದಿ ಸರ್ಕಾರದಿಂದ ವಕ್ಫ್ ಆಸ್ತಿ ಕಬಳಿಕೆ ಹುನ್ನಾರ: ಎಸ್‌ಡಿಪಿಐ ರಜ್ವಿ ರಿಯಾಜ್ ಅಹಮ್ಮದ್‌

| Published : Feb 15 2025, 12:31 AM IST

ಮೋದಿ ಸರ್ಕಾರದಿಂದ ವಕ್ಫ್ ಆಸ್ತಿ ಕಬಳಿಕೆ ಹುನ್ನಾರ: ಎಸ್‌ಡಿಪಿಐ ರಜ್ವಿ ರಿಯಾಜ್ ಅಹಮ್ಮದ್‌
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್ ತಿದ್ದುಪಡಿ ಮಸೂದೆ-2024 ಅಸಂವಿಧಾನಿಕ ಮಾತ್ರವಲ್ಲದೇ, ವಕ್ಫ್ ಸಂಪತ್ತನ್ನು ಕಬಳಿಸುವ ಹುನ್ನಾರವಾಗಿದೆ. ಕೋಮುವಾದಿ ಸರ್ಕಾರದ ಹುನ್ನಾರವು ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದಾಗಿದ್ದು, ಇದು ಸಂಪೂರ್ಣವಾಗಿ ಅನ್ಯಾಯಕರ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮ್ಮದ್‌ ಹೇಳಿದರು.

ರಾಜ್ಯಸಭೆಯಲ್ಲಿ ವಕ್ಫ್‌ ಕಾಯ್ದೆ ಮಂಡಿಸುವುದನ್ನು ವಿರೋಧಿಸಿ ಪ್ರತಿಭಟನೆ । ತಿದ್ದುಪಡಿ ಮಸೂದೆ ಪ್ರತಿ ಸುಟ್ಟು ಆಕ್ರೋಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ವಕ್ಫ್ ತಿದ್ದುಪಡಿ ಮಸೂದೆ-2024 ಅಸಂವಿಧಾನಿಕ ಮಾತ್ರವಲ್ಲದೇ, ವಕ್ಫ್ ಸಂಪತ್ತನ್ನು ಕಬಳಿಸುವ ಹುನ್ನಾರವಾಗಿದೆ. ಕೋಮುವಾದಿ ಸರ್ಕಾರದ ಹುನ್ನಾರವು ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದಾಗಿದ್ದು, ಇದು ಸಂಪೂರ್ಣವಾಗಿ ಅನ್ಯಾಯಕರ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮ್ಮದ್‌ ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆ-2024ನ್ನು ರಾಜ್ಯಸಭೆಯಲ್ಲಿ ಮಂಡಿಸುವುದನ್ನು ವಿರೋಧಿಸಿ ಸಂಘಟನೆ ಜಿಲ್ಲಾ ಘಟಕದಿಂದ ನಗರದಲ್ಲಿ ಮಸೂದೆಯ ಪ್ರತಿಗಳನ್ನು ಶುಕ್ರವಾರ ಹರಿದು, ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದರು.

ವಕ್ಫ್ ತಿದ್ದುಪಡಿ ಮಸೂದೆ-2024ನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ದೇಶವ್ಯಾಪಿ ಸಿಎಎ ಹಾಗೂ ಎನ್‌ಆರ್‌ಸಿ ಮಾದರಿಯ ಭಾರೀ ಪ್ರತಿಭಟನೆಗಳು ನಡೆಯಲಿವೆ. ನಾವೆಲ್ಲರೂ ಇಂದು ಇಲ್ಲಿ ಸೇರಿರುವುದು ಭಾರತದ ಸಮಸ್ತ ಮುಸ್ಲಿಂ ಸಮುದಾಯದ ಸಂವಿಧಾನಿಕ ಹಕ್ಕುಗಳು ಮತ್ತು ವಕ್ಫ್ ಆಸ್ತಿಗಳ ರಕ್ಷಿಸುವ ಬಗ್ಗೆ ಅಲ್ಲ. ನರೇಂದ್ರ ಮೋದಿ ಸರ್ಕಾರ ಈ ಮಸೂದೆಯ ಮೂಲಕ ವಕ್ಫ್ ಮಂಡಳಿ ಮೇಲೆ ಹಿಂದುತ್ವ ಆದರ್ಶಗಳನ್ನು ಬಲವಂತದಿಂದ ಹೇರಲು ಮುಂದಾಗಿರುವುದರ ವಿರುದ್ಧ ಎಂದು ಹೇಳಿದರು.

ಮೋದಿ ಸರ್ಕಾರದ ನಡೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾಗಿದೆ. ವಕ್ಫ್ ತಿದ್ದುಪಡಿ ಮಸೂದೆ-2024ರ ಹಿಂದಿನ ಅಸಲಿ ಉದ್ದೇಶವೇ ಬೇರೆ ಇದೆ. ವಕ್ಫ್ ಕಾಯ್ದೆಯ ಅನುಷ್ಠಾನವನ್ನು ಬಿಜೆಪಿ ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು, ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪ್ರಯತ್ನಿಸುತ್ತಿದೆ. ಈ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿಯಾಗಿದ್ದು, ವಕ್ಫ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.

ಈಗಿನ ಕಾನೂನುಗಳು ಹಿಂದು ಧಾರ್ಮಿಕ ಆಸ್ತಿಗಳನ್ನು ಹಿಂದೂ ಅಲ್ಲದವರಿಂದ ನಿರ್ವಹಿಸುವಂತಾಗಲು ನಿರ್ಬಂಧಿಸುತ್ತವೆ. ಆದರೆ, ಹೊಸ ವಕ್ಫ್ ಮಸೂದೆಯಡಿ ವಕ್ಫ್ ಬೋರ್ಡ್ ಸದಸ್ಯರ ಬಹುಪಾಲು, ಸಿಇಒ ಸಹ ಮುಸ್ಲಿಮರಾಗಿರುವುದು ಅವಶ್ಯಕತೆ ಇಲ್ಲ. ಇದು ವಕ್ಫ್ ಆಡಳಿತವನ್ನು ಕಬಳಿಸಲು ಮಾಡಿರುವ ಸಂಚಾಗಿದೆ. ಯಾವುದೇ ಕಾರಣಕ್ಕೂ ಇಂತಹ ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ನಾವು ಜಾರಿಗೊಳಿಸಲು ಬಿಡುವುದಿಲ್ಲ ಎಂದು ರಜ್ವಿ ರಿಯಾಜ್ ಅಹಮ್ಮದ್ ಎಚ್ಚರಿಸಿದರು. ಇಲ್ಲಿನ ಅಹಮ್ಮದ್ ನಗರದ ವೃತ್ತದಲ್ಲಿ ಎಸ್‌ಡಿಪಿಐ ಜಿಲ್ಲಾ ಮಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ವಕ್ಪ್ ತಿದ್ದುಪಡಿ ಮಸೂದೆ-2024 ಮಂಡನೆ ಮಾಡಲು ಹೊರಟಿದ್ದನ್ನು ಖಂಡಿಸಿ ಘೋಷಣೆಗಳನ್ನು ಕೂಗುವ ಮೂಲಕ ವಿರೋಧಿಸಿ, ಆಕ್ರೋಶ ಹೊರಹಾಕಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಯಾಹಿಯ, ಪ್ರಧಾನ ಕಾರ್ಯದರ್ಶಿ ಎ ಆರ್ ತಾಹೀರ್, ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಕಾರ್ಯದರ್ಶಿಗಳಾದ ಮಹಮ್ಮದ್ ಮೋಹಸೀನ್, ಮಹಮ್ಮದ್ ಜುನೈದ್, ಸದಸ್ಯರಾದ ರೆಹಮಾನ್ ಸಾಬ್, ಜಬೀ, ದಕ್ಷಿಣ ಅಧ್ಯಕ್ಷರಾದ ಏಜಾಜ್ ಅಹಮದ್, ಹರಿಹರ ಕಾರ್ಯದರ್ಶಿ ಸಮೀವುಲ್ಲಾ ಮುಜಾವರ್ ಇತರರು ಇದ್ದರು.