ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.14ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್‌ಶೋ ನಡೆಸಲಿರುವುದರಿಂದ ಎಸ್‌ಪಿಜಿ (ವಿಶೇಷ ಭದ್ರತಾ ವಿಭಾಗ) ತಂಡದ ಅಧಿಕಾರಿಗಳು ಗುರುವಾರ ಆಗಮಿಸಿ ಪರಿಶೀಲನೆ ನಡೆಸಿದರು.ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿ ತಂಡದ ಅಧಿಕಾರಿಗಳು ರೋಡ್‌ಶೋ ನಡೆಯುವ ರಸ್ತೆಯುದ್ಧಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ಪರಿಶೀಲನೆ ನಡೆಸಿದ್ದಾರೆ. ಮೋದಿ ಅವರು ಸಾಗುವ ರೋಡ್‌ಶೋ ಮ್ಯಾಪ್ ಸಿದ್ಧವಾಗಿದ್ದು, ನಗರದ ಲೇಡಿಹಿಲ್ ನಾರಾಯಣಗುರು ವೃತ್ತದಿಂದ ಲಾಲ್‌ಬಾಗ್, ಪಿವಿಎಸ್, ನವಭಾರತ್ ವೃತ್ತ, ಕೆಎಸ್‌ರಾವ್ ವೃತ್ತ ಮೂಲಕ ಹಂಪನಕಟ್ಟೆ ಸಿಗ್ನಲ್ ವರೆಗೆ ಪರಿಶೀಲನೆ ನಡೆಸಿದ್ದಾರೆ. ಎಸ್‌ಪಿಜಿ ಜತೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳೂ ಇದ್ದರು.
ಈ ವೇಳೆ ಪೊಲೀಸ್ ಕಮಿಷನರೇಟ್ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಎಸ್‌ಪಿಜಿ ಅಧಿಕಾರಿಗಳ ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ. ಇದಲ್ಲದೆ ಸುಮಾರು 1,500ಕ್ಕೂ ಅಧಿಕ ಪೊಲೀಸ್ ಭದ್ರತೆ ಕೂಡ ಏರ್ಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಧಾನಿಯ ರೋಡ್‌ಶೋ ನಾರಾಯಣಗುರು ವೃತ್ತದಿಂದ ನವಭಾರತ ವೃತ್ತವರೆಗೆ 2.1 ಕಿ.ಮೀ, ಆಗಲಿದ್ದು, ಹಂಪನಕಟ್ಟೆ ಸಿಗ್ನಲ್ ವರೆಗೆ 2.9 ಕಿ.ಮೀ. ಕ್ರಮಿಸಬೇಕಾಗುತ್ತದೆ. ಹಾಗಾಗಿ ಈ ಎರಡು ಆಯ್ಕೆಯೂ ಎಸ್‌ಪಿಜಿ ತಂಡದ ಮುಂದೆ ಇದ್ದು, ಶೀಘ್ರವೇ ರೋಡ್‌ಶೋ ಹಾದಿಯನ್ನು ಅಂತಿಮಗೊಳಿಸಲಿದೆ.
ವಿಶಿಷ್ಟ ರೀತಿಯಲ್ಲಿ ಸ್ವಾಗತ:ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ಶೋ ನಡೆಸುವ ಹಾದಿಯುದ್ಧಕ್ಕೂ 8-10 ಕಡೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾಗತ ಕೋರಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಆಯ್ದ ಎಂಟತ್ತು ಕಡೆಗಳಲ್ಲಿ ಕರಾವಳಿಯ ಜಾನಪದ ಸೊಗಡಿನ ಚಿತ್ರಣ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಈ ಮಾಹಿತಿಯನ್ನೂ ಎಸ್‌ಪಿಜಿಗೆ ಬಿಜೆಪಿ ಮುಖಂಡರು ನೀಡಿದ್ದಾರೆ. ಯಕ್ಷಗಾನ, ಹುಲಿ ವೇಷ, ಚೆಂಡೆ ಸೇರಿದಂತೆ ಜಾನಪದ ವೈವಿಧ್ಯಗಳ ಪ್ರದರ್ಶನ ರೋಡ್‌ಶೋಗೆ ಮೆರುಗು ನೀಡುವಂತೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಪ್ರತ್ಯೇಕ ಹೆಲಿಪ್ಯಾಡ್ ಇಲ್ಲ?:
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಿಂದ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ಬಹುತೇಕ ನೇರವಾಗಿ ರಸ್ತೆ ಮಾರ್ಗದಲ್ಲಿ ಆಗಮಿಸುವುದರಿಂದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣವನ್ನು ಆಂಶಿಕವಾಗಿ ಕೈಬಿಡಲಾಗಿದೆ. ಈ ಹಿಂದೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಸಮಾವೇಶ ನಡೆಸುವುದಾಗಿ ಹೇಳಲಾಗಿತ್ತು. ಅದಕ್ಕಾಗಿ ಹೆಲಿಪ್ಯಾಡ್ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.