ಇಂದು ವಿಜಯನಗರಕ್ಕೆ ಮೋದಿ ಆಗಮನ

| Published : Apr 28 2024, 01:18 AM IST

ಸಾರಾಂಶ

ಬಳ್ಳಾರಿ ಮತ್ತು ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳನ್ನೊಳಗೊಂಡು ವಿಜಯನಗರ ಜಿಲ್ಲಾ ಹೊಸಪೇಟೆ ಕೇಂದ್ರ ಸ್ಥಾನದಲ್ಲಿ ಬೃಹತ್ ವಿಜಯ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ನೆಲದಲ್ಲಿ ನಡೆಯಲಿರುವ "ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶ "ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏ.28ರಂದು ಸಂಜೆ 5 ಗಂಟೆಗೆ ಪ್ರಚಾರ ಸಭೆಯನ್ನುದ್ದೇಶಿಸಿ ಪ್ರಧಾನಿ ಚುನಾವಣಾ ಭಾಷಣ ಮಾಡಲಿದ್ದಾರೆ.

ನಗರದ ಡಾ.ಪುನೀತ್‌ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಬಳ್ಳಾರಿ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳನ್ನೊಳಗೊಂಡು ವಿಜಯನಗರ ಜಿಲ್ಲಾ ಹೊಸಪೇಟೆ ಕೇಂದ್ರ ಸ್ಥಾನದಲ್ಲಿ ಬೃಹತ್ ವಿಜಯ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಪರ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ.

ಮೋದಿ ವಾಸ್ತವ್ಯ:

ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆ ಸಮಾವೇಶ ಮುಗಿದ ಬಳಿಕ ಹೊಸಪೇಟೆಗೆ ಆಗಮಿಸಲಿದ್ದಾರೆ. ಈ ಸಮಾವೇಶದ ಬಳಿಕ ನಗರದ ರಾಯಲ್‌ ಆರ್ಕಿಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಾಗಾಗಿ ಈಗಾಗಲೇ ಸಕಲ ಭದ್ರತೆಯನ್ನು ಜಿಲ್ಲಾ ಪೊಲೀಸರು ಹಾಗೂ ಎಸ್‌ಪಿಜಿ ತಂಡ ಕೈಗೊಂಡಿದೆ. ಏ.29ರಂದು ಬೆಳಿಗ್ಗೆ 11 ಗಂಟೆಗೆ ಬಾಗಲಕೋಟೆಗೆ ಪ್ರಧಾನಿ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ಹೊಸಪೇಟೆಯಲ್ಲೇ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ನಗರದ ಭಟ್ಟರಹಳ್ಳಿ ಆಂಜನೇಯ ದೇವಾಲಯದ ಮೈದಾನ ಬಳಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

ಬಸ್‌ ಸಂಚಾರ ಮಾರ್ಗ ಬದಲಾವಣೆ:

ಏ.28ರಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ರೈಲ್ವೆ ನಿಲ್ದಾಣ ರಸ್ತೆ, ಪುನೀತ್‌ ರಾಜುಕುಮಾರ ಸರ್ಕಲ್, ಕಾಲೇಜ್ ರಸ್ತೆ, ಸಾಯಿಬಾಬಾ ಸರ್ಕಲ್ ಮೂಲಕ ಓಡಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಸಾಯಿಬಾಬಾ ಸರ್ಕಲ್‌ದಿಂದ ಎಪಿಎಂಸಿ ಮೂಲಕ ವಾಲ್ಮೀಕಿ ಸರ್ಕಲ್‌ನಿಂದ ರಾಮಾ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣ ತಲುಪುವುದು ಹಾಗೂ ಡ್ಯಾಂ ಕಡೆಗೆ ಇದೇ ಮಾರ್ಗವಾಗಿ ಸಂಚರಿಸುವುವಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇನ್ನು ನಗರದಲ್ಲಿ ಏಕಮುಖ ರಸ್ತೆಗಳನ್ನು ಮಾಡಲಾಗಿದೆ. ಸಮಾವೇಶಕ್ಕೆ ಬರುವ ಜನರಿಗಾಗಿ ಸೂಕ್ತ ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಭದ್ರತೆ:

ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ಸೂಚನೆ ಮೇರೆಗೆ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದಾರೆ. ಭದ್ರತೆಗೆ ನಾಲ್ವರು ಎಸ್ಪಿ, ನಾಲ್ವರು ಹೆಚ್ಚುವರಿ ಎಸ್ಪಿ, 17 ಡಿವೈಎಸ್ಪಿ, 37 ಸಿಪಿಐ, 73 ಪಿಎಸ್‌ಐ, 113 ಎಎಸ್‌ಐ, 1100 ಪೊಲೀಸ್‌ ಸಿಬ್ಬಂದಿ, 500 ಗೃಹರಕ್ಷಕ ದಳದ ಸಿಬ್ಬಂದಿ, ಎಂಟು ಎಎಸ್‌ಸಿ ತಂಡ, ನಾಲ್ಕು ಕೆಎಸ್‌ಆರ್‌ಪಿ ತುಕಡಿ, ಐದು ಡಿಎಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು 200 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.

ಭವ್ಯ ವೇದಿಕೆ:

ಪುನೀತ್‌ ರಾಜ್‌ಕುಮಾರ ಮೈದಾನದಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಜೊತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‌ ಅಗರವಾಲ್‌, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ 48 ಗಣ್ಯರು ಆಸೀನರಾಗಲಿದ್ದಾರೆ. ಇನ್ನು ಜನರಿಗೆ 60 ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ, ವಿಐಪಿ ಗ್ಯಾಲರಿ ಇರಲಿದೆ. 50 ಸಾವಿರಕ್ಕೂ ಅಧಿಕ ಪಾಸ್‌ಗಳನ್ನು ಈಗಾಗಲೇ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗಿದೆ. ಸಮಾವೇಶಕ್ಕೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇನ್ನು ಆರು ಎಲ್ಇಡಿ ಪರದೆಗಳನ್ನು ವ್ಯವಸ್ಥೆ ಮಾಡಲಾಗಿದೆ.

ರೈಲು ಸಂಚಾರ ಸ್ಥಗಿತ:

ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಏ.28ರಂದು ಸಂಜೆ 4.35ರಿಂದ ಸಂಜೆ 5.15ರವರೆಗೆ ಮತ್ತು ಏ.29ರಂದು ಬೆಳಗ್ಗೆ 10.30ರಿಂದ ಬೆಳಗ್ಗೆ 11.15ರವರೆಗೆ ರೈಲು ಸಂಚಾರ ನಿಲ್ಲಿಸುವಂತೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಕೋರಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಈ ರೈಲು ಸ್ಥಗಿತಗೊಳಿಸಲಾಗಿದೆ.

ಪ್ರಧಾನಿ ಮೋದಿ ಹೊಸಪೇಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಜನರು ಅಪಾರ ಸಂಖ್ಯೆಯಲ್ಲಿ ಹರಿದು ಬರಲಿದ್ದಾರೆ. 50 ಸಾವಿರಕ್ಕೂ ಅಧಿಕ ಪಾಸ್‌ಗಳನ್ನು ಕಾರ್ಯಕರ್ತರಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ. ಇನ್ನು ಪಾಸ್‌ಗಳ ಬೇಡಿಕೆ ಇದೆ. ಹಳ್ಳಿ, ಹಳ್ಳಿಗಳಿಂದಲೂ ಜನರು ಆಗಮಿಸಲಿದ್ದಾರೆ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌.