ಕನ್ನಡ ವಿವಿಗೆ 80 ಎಕರೆ ಉಳಿಸಿದ ಮೊಗಳ್ಳಿ ಗಣೇಶ ಇನ್ನಿಲ್ಲ

| Published : Oct 06 2025, 01:01 AM IST

ಕನ್ನಡ ವಿವಿಗೆ 80 ಎಕರೆ ಉಳಿಸಿದ ಮೊಗಳ್ಳಿ ಗಣೇಶ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ಮದ್ದೂರಿನ ಮಾದನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಹೊಸಪೇಟೆ: ಖ್ಯಾತ ಕಥೆಗಾರ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್ (63) ಬಹು ಅಂಗಾಗ ವೈಫಲ್ಯದಿಂದ ಭಾನುವಾರ ಬೆಳಗಿನಜಾವ ನಗರದ ಎಂ.ಪಿ. ಪ್ರಕಾಶ ನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಮಾದನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶಿವರಾಜ್‌ ತಂಗಡಗಿ, ಜಮೀರ್‌ ಅಹಮದ್‌ ಖಾನ್‌, ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಸಂತಾಪ ಸೂಚಿಸಿದ್ದಾರೆ.

ಕನ್ನಡ ವಿವಿಯ 80 ಎಕರೆ:

ಡಾ. ಮೊಗಳ್ಳಿ ಗಣೇಶ ಹಂಪಿ ಕನ್ನಡ ವಿವಿ 700 ಎಕರೆ ವಿದ್ಯಾರಣ್ಯ ಆವರಣದ ಪೈಕಿ 80 ಎಕರೆ ಜಾಗವನ್ನು ಆಗಿನ ಬಿ.ಎಸ್‌. ಯಡಿಯೂರಪ್ಪ (2010ರಲ್ಲಿ) ಸರ್ಕಾರ ಥೀಮ್‌ ಪಾರ್ಕ್‌ ಯೋಜನೆಗಾಗಿ ಹಸ್ತಾಂತರ ಮಾಡಿಕೊಳ್ಳಲು ಹೊರಟಾಗ ಸರ್ಕಾರದ ವಿರುದ್ಧವೇ ಕನ್ನಡ ವಿವಿಯಲ್ಲಿ ಇದ್ದುಕೊಂಡೇ ಹೋರಾಟ ರೂಪಿಸಿದರು. ಆಗಿನ ಸರ್ಕಾರ ಅವರ ಮೇಲೆ ಒತ್ತಡ ಹೇರಿದರೂ ಜಗ್ಗದೇ ಹೋರಾಟ ಸಂಘಟಿಸಿ, ಕನ್ನಡ ವಿವಿ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳ ಸಹಾಯದಿಂದ 80 ಎಕರೆ ಅಮೂಲ್ಯ ಜಮೀನು ಉಳಿಸಿದರು.

ಮೂಲತಃ ರಾಮನಗರದ ಚನ್ನಪಟ್ಟಣ ತಾಲೂಕಿನ ಮೊಗಳ್ಳಿ ಗ್ರಾಮದ ಮೊಗಳ್ಳಿ ಗಣೇಶ್ 1963ರ ಜುಲೈ 1ರಂದು ಜನಿಸಿದ್ದರು. ತಮ್ಮ ಕಥೆಗಳಿಂದ ಮನೆ ಮಾತಾಗಿದ್ದರು. ಅವರ ಕಥೆಗಳನ್ನು ಓದಿ ಆಗ ಮಂತ್ರಿ ಆಗಿದ್ದ ಎಂ.ಪಿ. ಪ್ರಕಾಶ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆ ಆಫರ್‌ ನೀಡಿದ್ದರು. ಒಲ್ಲದ ಮನಸ್ಸಿನಿಂದ ಅವರನ್ನು ಕಾಣಲು ವಿಧಾನಸೌಧಕ್ಕೆ ತೆರಳಿದ್ದರು.

ಹಂಪಿ ಕನ್ನಡ ವಿವಿಗೆ 1996ರಲ್ಲಿ ಸಂಶೋಧನಾ ಸಹಾಯಕರಾಗಿ ಗಣೇಶ್ ಮೊಗಳ್ಳಿ ಸೇರಿದರು. 1997 ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ಇತ್ತೀಚೆಗೆ ನಿವೃತ್ತರಾದರು. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ, ಜಾನಪದ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು.

ಬುಗುರಿ, ಅತ್ತೆ, ಮಣ್ಣು, ಭೂಮಿ, ಕನ್ನೆಮಳೆ, ಮೊಗಳ್ಳಿ ಕಥೆಗಳು, ದೇವರದಾರಿ ಅವರ ಪ್ರಮುಖ ಕಥಾ ಸಂಕಲಗಳಾಗಿವೆ. ತೊಟ್ಟಿಲು, ಕಿರೀಟ, ಅನಾದಿ, ಹೊಕ್ಕುಳು, ಅಲ್ಲಿ ಯಾರೂ ಇಲ್ಲ, ನಾನೆಂಬುದು ಕಿಂಚಿತ್ತು, ಬಿಟ್ಟುಹೋದ ಮನುಷ್ಯ ಕಾದಂಬರಿಗಳನ್ನು ಹೊರ ತಂದಿದ್ದಾರೆ. ದೇಸಿ, ಸೊಲ್ಲು, ದಲಿತರು ಮತ್ತು ಜಾಗತೀಕರಣ, ದಲಿತ ಕಥನ, ಶತಮಾನ, ನಡುಗಾಲದ ಕನ್ನಡ ನಾಡು, ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ಸೇರಿದಂತೆ ಪ್ರಮುಖ ಸಂಸ್ಕೃತಿ ಚಿಂತನಾ ಕೃತಿಗಳನ್ನು ಬರೆದಿದ್ದಾರೆ. ಸೂರ್ಯನ ಬಚ್ಚಿಡಬಹುದೆ, ದೇವಶ್ಯಸಾನ ಎಂಬ ಕಾವ್ಯಗಳನ್ನು ಬರೆದಿದ್ದಾರೆ.

ಮಾಸ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಮುದ್ದಣ್ಣ ರತ್ನಾಕರವರ್ಣಿ ಪ್ರಶಸ್ತಿ, ಜಿ.ಎಸ್‌. ಶಿವರುದ್ರಪ್ಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಿದ್ದಲಿಂಗಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.