ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಪ್ರಕೃತಿ ಇದ್ದರೆ ಮಾತ್ರ ಮನುಷ್ಯನ ಉಳಿವು ಸಾಧ್ಯ ಎಂದು ಬಂಡೀಪುರ ಅರಣ್ಯ ಇಲಾಖೆಯ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.ಸುತ್ತೂರು ವಸತಿ ಶಾಲೆಯ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ರಾಷ್ಟ್ರೀಯ ಅರಣ್ಯ ಉದ್ಯಾನವನಕ್ಕೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಮಾತನಾಡಿದರು. ವನ್ಯಜೀವಿಗಳನ್ನು ಹಿಂಸಿಸುವುದು ಅಪರಾಧ, ಶಾಲಾ ಕಾಲೇಜುಗಳಲ್ಲಿ ಪರಿಸರ ದಿನ ಹಾಗೂ ಇತರ ದಿನಗಳಂದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾಯಿದೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪ್ರಾಣಿಪ್ರಿಯರನ್ನು ಗೌರವಿಸಲಾಗುತ್ತಿದೆ. ವನ್ಯಜೀವಿಗಳ ಆರೋಗ್ಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷ ನಿಲ್ಲಬೇಕು. ಕಾಡು ಇದ್ದರೆ ನಾಡು, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿವೆ ಎಂಬುದನ್ನು ಯುವ ಪೀಳಿಗೆ ಅರಿತುಕೊಳ್ಳಬೇಕಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣವಾಗಬೇಕಿದೆ.ಮಠಗಳು, ಜನಪ್ರತಿನಿಧಿಗಳು, ವ್ಯಾಪಾರಸ್ಥರು ಹಾಗೂ ಪ್ರಖ್ಯಾತಕಲಾವಿದರು ವನ್ಯಜೀವಿಗಳನ್ನು ದತ್ತು ಸ್ವೀಕಾರ ಮಾಡುತ್ತಿರುವುದು ವನ್ಯಜೀವಿಗಳ ಸಂರಕ್ಷಣೆಗೆ ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.ಸುತ್ತೂರು ವಸತಿ ಶಾಲೆಯ ಮಕ್ಕಳು ಬೇಸಿಗೆ ರಜೆಯಲ್ಲಿ ಅವರ ಸ್ವಂತ ಸ್ಥಳಗಳಿಗೆ ಹೋಗಿ ಶಾಲೆ ಪ್ರಾರಂಭವಾದ ನಂತರ ಹಿಂದಿರುಗುತ್ತಾರೆ. ಬಹುದೂರದಿಂದ ಬಂದಿರುವ ಮಣಿಪುರ, ಮೇಘಾಲಯ ಹಾಗೂ ಇತರ ಕೆಲವು ರಾಜ್ಯಗಳಿಗೆ ಹೋಗಿ ಬರಲು ಸಾಧ್ಯವಾಗದ ಕಾರಣ ಅಲ್ಲಿನ ವಿದ್ಯಾರ್ಥಿಗಳು ಶ್ರೀಕ್ಷೇತ್ರದಲ್ಲಿಯೇ ಉಳಿಯುತ್ತಾರೆ. ಇವರಲ್ಲಿ ಈಶಾನ್ಯ ರಾಜ್ಯಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಮಾರ್ಗದರ್ಶನದಂತೆ ಸುಮಾರು 55 ವಿದ್ಯಾರ್ಥಿಗಳನ್ನು ಬಂಡೀಪುರದ ರಾಷ್ಟ್ರೀಯ ಅರಣ್ಯ ಉದ್ಯಾನವನಕ್ಕೆ ಕರೆದೊಯ್ಯಲಾಗಿತ್ತು.
ಇದೇ ವೇಳೆ ವಿದ್ಯಾರ್ಥಿಳಿಗೆ ಅರಣ್ಯ ಇಲಾಖೆ ವತಿಯಿಂದ ವೈಲ್ಡ್ ಲೈಫ್ ಎಂಬ ಸಿನಿಮಾ ಪ್ರದರ್ಶಿಸಲಾಯಿತು. ಬಂಡೀಪುರಯುವ ಮಿತ್ರ ಪ್ರಕೃತಿ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳು ಸಫಾರಿಗೆ ತೆರಳಿದ್ದರು. ಅರಣ್ಯದಲ್ಲಿ ಆನೆಗಳು, ನವಿಲುಗಳು, ಲಂಗೂರ್, ಸಾಂಬಾರ್ ಜಿಂಕೆ, ಕಡವೆ, ಇತ್ಯಾದಿ ಕಾಡುಪ್ರಾಣಿಗಳನ್ನು ಕಂಡು ವಿದ್ಯಾರ್ಥಿಗಳು ಸಂತಸಪಟ್ಟರು.