ಸಾರಾಂಶ
ಪಂಜಾಗಳನ್ನು ಕೂರಿಸಿದ್ದ ಸ್ಥಳದಲ್ಲಿ ನಡೆದ ಮೊಹರಂ ಕೊಂಡವನ್ನು ಭಕ್ತರು ಹಾಯ್ದರು.
ಹುಬ್ಬಳ್ಳಿ: ನಗರದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸಲಾಯಿತು.
ಸಾಮರಸ್ಯದ ಸಂಕೇತ ಎಂದೇ ಕರೆಯಲಾಗುವ ಹಬ್ಬದಲ್ಲಿ ಹಿಂದೂ,ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದವರು ಪಾಲ್ಗೊಂಡರು.ಹಳೇ ಹುಬ್ಬಳ್ಳಿಯ, ಗಣೇಶ ಪೇಟೆ, ಅರವಿಂದ ನಗರ, ಗಂಜಿಪೇಟೆ, ಈಶ್ವರ ನಗರ, ಬಮ್ಮಾಪುರ ಓಣಿ, ಬೆಂಗೇರಿ ಸೇರಿದಂತೆ ವಿವಿಧೆಡೆ ಮೊಹರಂ ನಿಮಿತ್ತ ಬೆಳಗ್ಗೆ ಪಂಜಾಗಳ ಮೆರವಣಿಗೆ ನಡೆಯಿತು.ಪಂಜಾಗಳನ್ನು ಕೂರಿಸಿದ್ದ ಸ್ಥಳದಲ್ಲಿ ನಡೆದ ಮೊಹರಂ ಕೊಂಡವನ್ನು ಭಕ್ತರು ಹಾಯ್ದರು.ಒಣಕೊಬ್ಬರಿ, ಸಕ್ಕರೆ ಅರ್ಪಿಸಿ ಭಕ್ತಿ ಮೆರೆದರು. ಬೀದಿಗಳಲ್ಲಿ ಪಂಜಾಗಳ ಮೆರವಣಿಗೆ ನಡೆಯಿತು.ತರಹೇವಾರಿ ಬಣ್ಣದ ಬಟ್ಟೆ, ಅಲಂಕಾರಿಕ ಪೇಪರ್,ವರ್ಣರಂಜಿತ ರಿಬ್ಬನ್ ಹಾಗೂ ಬಿದಿರಿನ ಕಡ್ಡಿಗಳಿಂದ ಸುಂದರವಾಗಿ ಅಲಂಕರಿಸಿದ ಪಂಜಾಗಳನ್ನು ನೋಡಲು ಜನ ಮುಗಿಬಿದ್ದರು.ಕೆಲವೆಡೆ ಮುಸ್ಲಿಂ ಬಾಂಧವರು ಶರಬತ್, ಮತ್ತು ತಂಪು ಪಾನೀಯ ವಿತರಿಸಿದರು.ಕೆಲವೆಡೆ ಮೊಹರಂ ಕೊನೆ ದಿನದ ನಿಮಿತ್ತ ಅನ್ನಸಂತರ್ಪಣೆ ಕೂಡ ನಡೆಯಿತು.
ಇನ್ನು ಮಿಶ್ರಿಕೋಟೆಯಲ್ಲೂ ಬೆಳಗ್ಗೆ ಪಂಜಾಗಳು ಕೆಂಡ ಹಾಯ್ದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ದೇವರಗುಡಿಹಾಳ, ರಾಯನಾಳ,ಗಬ್ಬೂರು ಸೇರಿದಂತೆ ಮೊಹರಂ ನಿಮಿತ್ತ ದೇವರ ಮೆರವಣಿಗೆ ನಡೆಯಿತು. ರಾತ್ರಿ ವೇಳೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಪಂಜಾಗಳನ್ನು ಪಾದಗಟ್ಟೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸಲಾಯಿತು.