ಸಾರಾಂಶ
ಗಜೇಂದ್ರಗಡ: ಮಂಗಳವಾರ ಸ್ಥಳೀಯ ಕುಷ್ಟಗಿ ರಸ್ತೆಯ ಮುತ್ತಣ್ಣ ಮೆಣಸಿನಕಾಯಿ ಅವರ ಬಯಲು ಜಾಗದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಸಹಯೋಗದಲ್ಲಿ ನಡೆದ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರೀಮಿಯರ್ ಲೀಗ್ ಸೀಜನ್- ೨ನ ಕ್ರಿಕೆಟ್ ಪಂದ್ಯಾವಳಿಯನ್ನು ಮೋಮಿನ್ ರೈಸಿಂಗ್ ಸ್ಟಾರ್ಸ್ ತಂಡ ಗೆದ್ದುಕೊಂಡಿತು.
ಫೈನಲ್ ಪ್ರವೇಶಿಸಿದ್ದ ಮೋಮಿನ್ ರೈಸಿಂಗ್ ಸ್ಟಾರ್ಸ್ ಹಾಗೂ ಸಾಗರ್ ವಾರಿಯರ್ಸ್ ನಡುವೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೋಮಿನ್ ರೈಸಿಂಗ್ ಸ್ಟಾರ್ಸ್ ೧೦ ಒವರ್‌ಗೆ ೯೬ ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಸಾಗರ್ ವಾರಿಯರ್ಸ್ ಆರಂಭದಲ್ಲೇ ಪ್ರಮುಖ ೩ ವಿಕೆಟ್ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಚೇತರಿಸಿಕೊಂಡು ತಂಡವು ಕೊನೆಯ ೧೨ ಎಸೆತಗಳಲ್ಲಿ ೨೪ ರನ್ ಬೇಕಿದ್ದಾಗ ಮೋಮಿನ್ ರೈಸಿಂಗ್ ಸ್ಟಾರ್ಸ್ ತಂಡದ ಬಿಗಿಯಾದ ಬೌಲಿಂಗ್‌ಗೆ ಸಾಗರ್ ವಾರಿಯರ್ಸ್ ೨೦ ರನ್‌ಗಳಿಂದ ಶರಣಾಗಿದ್ದರಿಂದ ಮೋಮಿನ್ ರೈಸಿಂಗ್ ಸ್ಟಾರ್ಸ್ ಗೆಲುವಿನ ನಗೆಬೀರಿತು.ಕ್ರೀಡಾಂಗಣ ಶೀಘ್ರ: ರಾಜ್ಯ ಹಾಗೂ ದೇಶದ ಕ್ರೀಡಾ ತಂಡವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಉದಯಿಸಲಿ. ಕ್ರೀಡಾಪಟುಗಳಿಗೆ ಅಗತ್ಯ ಸಹಕಾರ ನೀಡುವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿ, ಪಟ್ಟಣದಲ್ಲಿ ಕಳೆದ ೧೦ ದಿನಗಳಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯು ಕುತೂಹಲದ ಜತೆಗೆ ಅಂತಿಮ ಘಟ್ಟ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯಶಸ್ಸು ಒಬ್ಬರಿಂದ ಸಾಧ್ಯವಿಲ್ಲ. ಒಗ್ಗಟ್ಟು ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂಬುದಕ್ಕೆ ಈ ಕ್ರೀಡಾಕೂಟ ಸಾಕ್ಷಿಯಾಗಿದೆ ಎಂದರು.ಪಟ್ಟಣದ ಗುಡ್ಡದ ಮೇಲೆ ತಾಲೂಕು ಮಟ್ಟದ ಕ್ರೀಡಾಂಗಣ ನಿರ್ಮಿಸಲು ಉದ್ದೇಶವಿತ್ತು. ಆದರೆ ಊರಿನ ಕೆಲವರು ಅದು ಸುಸೂತ್ರವಾಗಿ ನಡೆಯಬಾರದು ಎಂದು ಅಡ್ಡ ಬಂದಿದ್ದರಿಂದ ನಾನು ಸಹ ಗುಡ್ಡದ ಮೇಲೆ ಕ್ರೀಡಾಂಗಣ ನಿರ್ಮಿಸುವ ಆಶಯ ಬಿಟ್ಟಿದ್ದೇನೆ. ಆದರೆ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡುವ ದಾನಿಗಳಿಗೆ ₹೧ ಕೋಟಿ ಹಣದ ಜತೆಗೆ ಕ್ರೀಡಾಂಗಣಕ್ಕೆ ಅವರ ಮನೆತನದ ಹೆಸರನ್ನಿಡುವ ಆಶಯಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೆ ಚಾಲನೆ ಸಿಗಲಿದೆ ಎಂದರು.
ಶುಭ ಹಾರೈಕೆ: ಡಾ. ಎಪಿಜೆ ಅಬ್ದುಲ್ ಕಲಾಂ ಪ್ರೀಮಿಯರ್ ಲೀಗ್ ಸೀಜನ್-೨ನ ಯಶಸ್ಸಿಗೆ ಶ್ರಮಿಸಿದ ಮುರ್ತುಜಾ ಡಾಲಾಯತ್ ಸೇರಿ ಪ್ರಮುಖರನ್ನು ಸ್ಮರಿಸಿದ ಗಣ್ಯರು, ಮುಂದಿನ ದಿನಗಳಲ್ಲಿ ಇಂತಹ ಕ್ರೀಡೆಗಳು ಹೆಚ್ಚೆಚ್ಚು ನಡೆಯಲಿ ಎಂದು ಶುಭ ಹಾರೈಸಿದರು.ಪುರಸಭೆ ಸದಸ್ಯ, ಆಯೋಜಕ ಪ್ರಮುಖ ಮುರ್ತುಜಾ ಡಾಲಾಯತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕರ, ಶಿವರಾಜ ಘೋರ್ಪಡೆ, ಮುಖಂಡರಾದ ಎಚ್.ಎಸ್. ಸೋಂಪುರ, ಎ.ಡಿ. ಕೋಲಕಾರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ನೂರಲ್ ಹಸನ ತಟಗಾರ ಮಾತನಾಡಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಡಾ. ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ರಫೀಕ್ ತೋರಗಲ್, ಮುಖಂಡ ಮುತ್ತಣ್ಣ ಮೆಣಸಿನಕಾಯಿ, ಶ್ರೀಧರ ಬಿದರಳ್ಳಿ, ಎಂ.ಎಚ್. ಕೋಲಕಾರ, ವಿ.ಬಿ. ಸೋಮನಕಟ್ಟಿಮಠ, ಮುತ್ತಣ್ಣ ಚಟ್ಟೇರ, ಗುಲಾಂ ಹುನಗುಂದ, ಸದ್ದಾ ಮನಿಯಾರ, ಆರೀಫ್ ಮನಿಯಾರ, ರಫೀಕ್ ಬಾಗಲಕೋಟ, ಇಮ್ರಾನ ಅತ್ತಾರ, ಗೈಬು ನಿಶಾನದಾರ, ಮುನ್ನಾ ಚವಡಿ, ಅಲಿ ಸಾಗರ, ಭಾಷಾ ಮುದಗಲ್ ಸೇರಿ ೮ ತಂಡಗಳ ಕ್ರೀಡಾಪಟುಗಳು, ಇತರರು ಇದ್ದರು.