ಸಾರಾಂಶ
ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೇ ಪಿ.ಬಿ. ರಸ್ತೆಯ ವಿವಾದ ಧಾರವಾಡದ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿದೆ. ರಸ್ತೆ ನಿರ್ಮಾಣ ಮಾಡಿದ ಕೋಟ್ಯಂತರ ರುಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ ಅಧಿಕಾರಿಗಳಿಂದ ವೆಚ್ಚ ಭರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೇ ಪಿ.ಬಿ. ರಸ್ತೆಯ ವಿವಾದ ಧಾರವಾಡದ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿದೆ. ರಸ್ತೆ ನಿರ್ಮಾಣ ಮಾಡಿದ ಕೋಟ್ಯಂತರ ರುಪಾಯಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿದ ಅಧಿಕಾರಿಗಳಿಂದ ವೆಚ್ಚ ಭರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಆಗ್ರಹಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೇ ಪಿ.ಬಿ.ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹20 ಕೋಟಿ ಪರಿಹಾರ ನೀಡಬೇಕೆಂದು ಸೂಚನೆ ನೀಡಿದ ವೇಳೆ ಪಾಲಿಕೆಯಲ್ಲಿ ವಿಶೇಷ ಸಭೆ ಕರೆದು ಮೇಯರ್ ಹಣ ತುಂಬಲು ಒಪ್ಪಿಕೊಂಡಿರುವುದು ನಗರದ ಅಭಿವೃದ್ಧಿಗೆ ಮಾರಕವಾಗಿದೆ ಎಂದರು.
ಬೆಳಗಾವಿ ನಗರದ ಅಭಿವೃದ್ಧಿಗೆ ಪಾಲಿಕೆ ಸದಸ್ಯರು ನಿರ್ಣಯ ಕೈಗೊಂಡರೆ ಎಲ್ಲರೂ ಕೈಜೋಡಿಸುತ್ತೇವೆ. ಆದರೆ, ಮೇಯರ್ ನೇತೃತ್ವದ ವಿಶೇಷ ಸಭೆಯಲ್ಲಿ ಸಂತ್ರಸ್ತರಿಗೆ ಹಣ ನೀಡುವ ಬದಲು ಪರ್ಯಾಯ ಮಾರ್ಗ ಹುಡುಕದೆ ₹20 ಕೋಟಿ ಪರಿಹಾರ ನೀಡಲು ಮುಂದಾಗಿದ್ದು ದೊಡ್ಡ ದುರಂತ ಎಂದು ದೂರಿದರು.ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ದೊಡ್ಡ ರಸ್ತೆ ಕಾಮಗಾರಿಯಲ್ಲಿ ಇಷ್ಟೊಂದು ಅವ್ಯವಹಾರವಾಗಿದ್ದರೂ ಸ್ಥಳೀಯ ಶಾಸಕ ಅಭಯ ಪಾಟೀಲ ಹಾಗೂ ಸಂಸದ ಜಗದೀಶ ಶೆಟ್ಟರ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ಉಳಿಸಿ ಅಭಿಯಾನ ಆರಂಭಿಸಿದ ಮೇಲೆ ಹೈಕೋರ್ಟ್ ಉತ್ತಮ ಆದೇಶ ನೀಡಿ ನ್ಯಾಯ ಎತ್ತಿ ಹಿಡಿದಿದೆ ಎಂದರು.ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೇ ಪಿ.ಬಿ. ರಸ್ತೆಯವರೆಗೆ ರಸ್ತೆ ಅಗಲೀಕರಣ ಮಾಡಿರುವುದೇ ಅವೈಜ್ಞಾನಿಕವಾಗಿದೆ. ಸ್ಮಾರ್ಟ್ ಸಿಟಿಯ ಪಿಎಂಸಿ ಕಂಪನಿಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯಿಂದ ಜನರು ಬೇಸತ್ತಿದ್ದಾರೆ ಎಂದು ಹೇಳಿದರು.
ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿ.ಬಿ.ರಸ್ತೆಯವರೆಗೆ ನಿರ್ಮಾಣ ಮಾಡಿದ್ದ 500 ಮೀಟರ್ ರಸ್ತೆ ನಿರ್ಮಾಣಕ್ಕೆ ₹7.2 ಕೋಟಿ ಹಣ ವೆಚ್ಚವಾಗಿದೆ. 10 ದಿನದೊಳಗೆ ಹಿಂದಿನ ಸ್ಮಾರ್ಟ್‌ಸಿಟಿ ಎಂ.ಡಿ. ಅಂದಿನ ಪಾಲಿಕೆಯ ಆಯುಕ್ತರ ಸಂಬಳದಿಂದ ಆ ವೆಚ್ಚ ತುಂಬಿಸಿಕೊಳ್ಳಬೇಕೆಂದು ಒತ್ತಾಯಿಸಿದರು. ಹೈಕೋರ್ಟ್ ವಕೀಲ ನಿತಿನ್ ಬೋಳಬಂದಿ ಉಪಸ್ಥಿತರಿದ್ದರು.