ಸ್ಕ್ಯಾನಿಂಗ್ ಕೇಂದ್ರ ನಿಗಾ ವಹಿಸಿ, ಭ್ರೂಣಹತ್ಯೆ ಗಂಭೀರವಾಗಿ ಪರಿಗಣಿಸಿ: ದಿನೇಶ್ ಗುಂಡೂರಾವ್ ಸೂಚನೆ

| Published : Dec 19 2023, 01:45 AM IST

ಸ್ಕ್ಯಾನಿಂಗ್ ಕೇಂದ್ರ ನಿಗಾ ವಹಿಸಿ, ಭ್ರೂಣಹತ್ಯೆ ಗಂಭೀರವಾಗಿ ಪರಿಗಣಿಸಿ: ದಿನೇಶ್ ಗುಂಡೂರಾವ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳ ಪ್ರಗತಿ ಹಾಗೂ ಅನುಷ್ಠಾನ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ 29 ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳ ಪ್ರಗತಿ ಹಾಗೂ ಅನುಷ್ಠಾನ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಕೆಲವು ಜಿಲ್ಲೆಯಲ್ಲಿ ಭ್ರೂಣಹತ್ಯೆ ಮಾಡುವುದು ಕೇಳಿಬರುತ್ತಿದ್ದು, ಭ್ರೂಣಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 21 ವರ್ಷದಲ್ಲಿ ಸ್ಕ್ಯಾನಿಂಗ್ ಕೇಂದ್ರಗಳ ಸಂಬಂಧ ಒಂದು ಪ್ರಕರಣವು ದಾಖಲಾಗಿಲ್ಲ. ಆ ನಿಟ್ಟಿನಲ್ಲಿ ಎಲ್ಲವೂ ಸರಿಯಿದೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಬೇಕಿದೆ ಎಂದು ಸಚಿವರು ಹೇಳಿದರು.

ಈ ಕುರಿತು ಧ್ವನಿಗೂಡಿಸಿದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ವೈದ್ಯಾಧಿಕಾರಿಗಳ ನಡುವೆ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ಸಂಶಯ ಉಂಟಾಗುತ್ತಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು ಸ್ಟಿಂಗ್‌ ಆಪರೇಷನ್ ಮೂಲಕ ಸ್ಕ್ಯಾನಿಂಗ್ ಕೇಂದ್ರಗಳ ಚಟುವಟಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜೊತೆಗೆ ಸಾರ್ವಜನಿಕರಿಂದಲೂ ಅಭಿಪ್ರಾಯ ಪಡೆಯುವಂತಾಗಬೇಕು. ‘ಲಿಂಗ ಆಯ್ಕೆ ನಿಷೇಧ’ವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದರು.

ಸ್ಕ್ಯಾನಿಂಗ್ ಕೇಂದ್ರಗಳು ಅಧಿಕೃತವಾಗಿ ನೋಂದಣಿಯಾಗಿರಬೇಕು. ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳು ನಡೆಯಬಾರದು ಎಂದು ಸಚಿವರು ಹೇಳಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಕೊಡಗು ಜಿಲ್ಲೆಯಲ್ಲಿ ಲಿಂಗಾನುಪಾತವು 978 ಇದೆ ಎಂದು ಮಾಹಿತಿ ನೀಡಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಮಾತನಾಡಿ, 2011ರ ಜನಗಣತಿ ಪ್ರಕಾರ 978 ಮಕ್ಕಳ ಲಿಂಗಾನುಪಾತ ಕಾಣಬಹುದಾಗಿದೆ ಎಂದು ವಿವರಿಸಿದರು.

ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ಇದ್ದು, ಅಭಿವೃದ್ಧಿಯ ಕಾರ್ಯಗಳು ನಡೆಯಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳು, ಮಾನವ ಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು, ಹೀಗೆ ಹಲವು ವಿಷಯಗಳ ಮಾಹಿತಿ ಸಂಗ್ರಹಿಸಿ ಬೇಡಿಕೆಗೆ ಸ್ಪಂದಿಸುವುದು ಕರ್ತವ್ಯ ಎಂದು ಸಚಿವರು ಹೇಳಿದರು.

ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಆಧಾರ ಸ್ತಂಭವಾಗಿದ್ದು, ಇವುಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಇಚ್ಛಾಶಕ್ತಿ ಅತ್ಯಗತ್ಯವಾಗಿದ್ದು, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು.

ಪೊನ್ನಂಪೇಟೆ ಮತ್ತು ಕುಶಾಲನಗರದಲ್ಲಿ ತಾಲೂಕು ಆಸ್ಪತ್ರೆ ಆಗಬೇಕಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಆಸ್ಪತ್ರೆ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.

* ತಜ್ಞ ವೈದ್ಯರ ಕೊರತೆ

ಕೊಡಗು ಜಿಲ್ಲೆಯಲ್ಲಿ ವೈದ್ಯರು, ತಜ್ಞ ವೈದ್ಯರ ಸಂಖ್ಯೆ ಕಡಿಮೆ ಇದ್ದು, ಕೊಡಗು ಜಿಲ್ಲೆಯನ್ನು ವಿಶೇಷ ಜಿಲ್ಲೆ ಎಂದು ಪರಿಗಣಿಸಿ ವೈದ್ಯರ ನಿಯೋಜನೆಗೆ ಕ್ರಮವಹಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.ಕೊಡಗು ಜಿಲ್ಲೆಯಲ್ಲಿ 1336 ಮಂಜೂರಾತಿ ಹುದ್ದೆಯಲ್ಲಿ 838 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 498 ಹುದ್ದೆಗಳು ಖಾಲಿ ಇದ್ದು, ಈ ಸಂಬಂಧ ಕೊಡಗು ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯೂ ಸಹ 464 ಮಂಜೂರಾತಿ ಹುದ್ದೆಯಲ್ಲಿ 417 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 47 ಹುದ್ದೆಗಳು ಖಾಲಿ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು.

ತಾಯಿ ಮತ್ತು ಶಿಶು ಮರಣ ತಡೆಯುವುದು, ಗರ್ಭಿಣಿಯರು ಮತ್ತು ಶಿಶು ಪಾಲನೆ ಸಂಬಂಧಿಸಿದಂತೆ ವಿಶೇಷ ಕಾಳಜಿ ವಹಿಸುವುದು ಮತ್ತಿತರ ಬಗ್ಗೆ ಗಮನಹರಿಸುವಂತೆ ಸಚಿವರು ಸೂಚಿಸಿದರು.ಕೊಡಗು ಜಿಲ್ಲೆಯಲ್ಲಿ ಏಪ್ರಿಲ್ 2023ರಿಂದ ನವೆಂಬರ್ ವರೆಗೆ 4,945 ಗರ್ಭಿಣಿಯರಿದ್ದು, 106 ಮಂದಿ ರಕ್ತಹೀನತೆ ಹಾಗೆಯೇ ರಕ್ತಹೀನತೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು 140 ಮಂದಿ ಗರ್ಭಿಣಿಯರು ಚಿಕಿತ್ಸೆ ಪಡೆದಿದ್ದಾರೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ಸಂಪೂರ್ಣ ಲಸಿಕೆಯನ್ನು 5745 ಮಕ್ಕಳು ಪಡೆದಿದ್ದು, 9-11 ತಿಂಗಳೊಳಗಿನ ಸಂಪೂರ್ಣ ಲಸಿಕೆ ಪಡೆದ ಮಕ್ಕಳು 5,088 ಆಗಿದೆ ಎಂದು ಡಾ.ಸತೀಶ್ ಕುಮಾರ್ ವಿವರಿಸಿದರು.

ಹಾಗೆಯೇ ಕೊಡಗು ಜಿಲ್ಲೆಯ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಇ-ಸಂಜೀವಿನಿ ಕಾರ್ಯಕ್ರಮ ಅನುಷ್ಠಾನ ಮಾಡುವುದು. ಇ-ಆಸ್ಪತ್ರೆ ಸರಿಪಡಿಸುವುದು, ಆಧಾರ್ ಆಧಾರಿತ ಬಯೋ ಮೆಟ್ರಿಕ್ ಹಾಜರಾತಿ ಜಾರಿಗೊಳಿಸುವುದು, ರಾಷ್ಟ್ರೀಯ ಗುಣಮಟ್ಟ ಸುಧಾರಣೆ ಯೋಜನೆ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಗತಿ, ಇ-ಕಚೇರಿ ನಿರ್ವಹಣೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಆದಷ್ಟು ಶೀಘ್ರ ತಜ್ಞ ವೈದ್ಯರನ್ನು ನಿಯೋಜಿಸುವಂತಾಗಬೇಕು ಎಂದು ಸಚಿವರಲ್ಲಿ ಕೋರಿದರು.ಎಂಆರ್‌ಐ ಸ್ಕ್ಯಾನಿಂಗ್‌ ಅಳವಡಿಸುವುದು ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ಹಾಗೂ ಉಪಕರಣಗಳನ್ನು ಒದಗಿಸುವಂತಾಗಬೇಕು ಎಂದು ಶಾಸಕರು ಮನವಿ ಮಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ರಂದೀಪ್ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ನವೀನ್ ಭಟ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಜಿ.ಪಂ. ಸಿಇಒ ವರ್ಣಿತ್ ನೇಗಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.