ಲಿಂಗಾಪುರ ಗ್ರಾಮಸ್ಥರಿಗೆ ಕೋತಿಗಳ ಉಪಟಳ

| Published : May 14 2024, 01:02 AM IST

ಸಾರಾಂಶ

ಲಿಂಗಾಪುರ ಗ್ರಾಮದಲ್ಲಿ ಕೋತಿ ಕಾಟ ಹೆಚ್ಚಾಗಿದ್ದು, ಗ್ರಾಮದ ಜನರು ತಮ್ಮ ಮನೆಗಳಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಕೋತಿ ಕಾಟ ಹೆಚ್ಚಾಗಿದ್ದು, ಗ್ರಾಮದ ಜನರು ತಮ್ಮ ಮನೆಗಳಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸುಮಾರು 30ಕ್ಕೂ ಹೆಚ್ಚು ಮುಸಿಯಾಗಳಿದ್ದು, ಅವುಗಳಲ್ಲಿ 1 ಮುಸಿಯಾ ಮಾತ್ರವೇ ವಿಚಿತ್ರವಾಗಿ ವರ್ತಿಸುತ್ತಿದ್ದು ಯಾವಾಗ ಅವು ಮನೆಯೊಳಗೆ ನುಗ್ಗಿ ದಾಳಿ ಮಾಡಿ ಬಿಡುವುದೋ ಎಂಬ ಭಯದಿಂದ ಇಂತಹ ಬಿರು ಬಿಸಿಲಿನಲ್ಲೂ ಸದಾ ಮನೆಯ ಕಿಟಕಿ ಮತ್ತು ಬಾಗಿಲು ಹಾಕಿಕೊಂಡು ಇರುವ ಹಾಗಾಗಿದೆ ಎಂದು ಲಿಂಗಾಪುರ ಗ್ರಾಮದ ಜಿ.ಸಿ.ಸೋಮಶೇಖರ್ ಕೋತಿಗಳಿಂದ ಪಡುವ ಫಜೀತಿ ಬಗ್ಗೆ ಹೇಳಿದರು. ಈಗಾಗಲೇ ತಮ್ಮ ಮನೆಯ ಮುಂಭಾಗದಲ್ಲಿದ್ದ ಕುರ್ಚಿಗಳನ್ನು ಮುರಿದು ಹಾಕಿದ್ದು, ಕಿಟಕಿ ಹತ್ತಿರ ಮನೆಯೊಳಗೆ ನುಗ್ಗಲು ಕಾದು ಕುಳಿತಿರುತ್ತವೆ. ಮನೆಯಲ್ಲಿ ಹೆಣ್ಣು ಮಕ್ಕಳು ಇವುಗಳ ಕಾಟದಿಂದ ಹೆದರಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗದೇ ಕೋತಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಸ್ಥಳಿಯ ಗ್ರಾಮ ಪಂಚಾಯಿತಿಯವರಿಗೆ ಮತ್ತು ಚನ್ನಗಿರಿ ವಲಯದ ಅರಣ್ಯಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿ ಅವುಗಳನ್ನು ಹಿಡಿಸುವಂತೆ ಮನವಿ ಮಾಡಿದರೆ ಅವರು ಬೇಜವಾಬ್ದಾರಿತನದಿಂದ ಉತ್ತರಿಸುತ್ತಾರೆ ಎಂದು ಮಾಹಿತಿ ನೀಡಿದರು.

ಸಂಬಂಧಪಟ್ಟವರೇ ಹೀಗೇ ಹೇಳಿದರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.