ಸಾರಾಂಶ
ಮೊದಲ ದಿನ ಡಾ.ಶರಣ ಪ್ರಕಾಶ ಪಾಟೀಲರಿಂದ ಉದ್ಘಾಟನೆ. ಮೂರು ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಹಬ್ಬದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಎತ್ತುಗಳು ಈಗಾಗಲೇ ಬೀಡು ಬಿಟ್ಟಿದ್ದು, ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗಾಗಿ ತಯಾರಿ ಮಾಡಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ಪ್ರತಿ ವರ್ಷದಿಂತೆ ಈ ಬಾರಿಯೂ ಕಾರ ಹುಣ್ಣಿಮೆ ನಿಮಿತ್ತ ಜಿಲ್ಲಾ ಮುನ್ನೂರು ಕಾಪು (ಬಲಿಜ) ಸಮಾಜದಿಂದ ನಗರದಲ್ಲಿ ಮೂರು ದಿನಗಳ ಕಾಲ (21 ರಿಂದ 23 ವರೆಗೆ) ಹಮ್ಮಿಕೊಂಡಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಶುಕ್ರವಾರ ಚಾಲನೆ ದೊರೆಯಲಿದ್ದು ಈ ಹಿನ್ನೆಲೆ ಗುರುವಾರ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದ್ದವು.ಮಾಜಿ ಶಾಸಕ ಹಾಗೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಸಮಿತಿಯ ಅಧ್ಯಕ್ಷ ಎ.ಪಾಪಾರೆಡ್ಡಿ ನೇತೃತ್ವದಲ್ಲಿ ಕಳೆದ 24ನೇ ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಆಯೋಜಿಸುತ್ತಾ ಬರಲಾಗುತ್ತಿದೆ.
ಈ ರ್ವರ್ಷದ ಹಬ್ಬದ ಮೊದಲ ದಿನವಾದ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ಎತ್ತುಗಳಿಂದ ಒಂದು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಎತ್ತುಗಳು ಈಗಾಗಲೇ ಬೀಡು ಬಿಟ್ಟಿದ್ದು, ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗಾಗಿ ತಯಾರಿ ಮಾಡಿಕೊಳ್ಳಲಾಗಿದೆ.ಆವರಣದಲ್ಲಿ ಒಂದೂವರೆ ಟನ್, ಎರಡು ಟನ್ ಹಾಗೂ ಎರಡೂವರೆ ಟನ್‌ಗಳ ಭಾರದ ಕಲ್ಲುಗಳಿಗೆ ಬಣ್ಣ ಬಳಿದು ಸಿದ್ಧಪಡಿಸಲಾಗಿದೆ. ಅತಿ ದೂರ ಕ್ರಮಿಸುವ ಎತ್ತುಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ. ಕೃಷಿ ಬದುಕಿಗೆ ಹೊಂದಿಕೊಂಡಿರುವ ಈ ಹಬ್ಬದ ಜತೆ ಸಂಸ್ಕೃತಿಯೂ ಮೇಳೈಸುವುದರಿಂದ ಅದನ್ನು ಕಣ್ತುಂಬಿಕೊಳ್ಳಲೆಂದೇ ನಾನಾ ಭಾಗಗಳಿಂದ ಜನ ಆಗಮಿಸುತ್ತಾರೆ.
ಸಮೃದ್ಧಿ ಮಳೆಯಾಗಲಿ, ಉತ್ತಮ ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂಬ ಮಹತ್ಕಾರ್ಯದಿಂದ ಮುನ್ನೂರು ಕಾಪು ಸಮಾಜ ಈ ಕಾರ್ಯಕ್ರಮವನ್ನು ಬಲು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿದೆ. ಮುಂಗಾರು ಶುರುವಿನ ಮುನ್ನ ರೈತರು ಕೃಷಿ ಚಟುವಟಿಕೆಗೆ ಸಿದ್ಧಗೊಳ್ಳುತ್ತಿರುತ್ತಾರೆ. ಇಂಥ ಹೊತ್ತಲ್ಲಿ ಅವರಿಗೆ ಮನರಂಜಿಸುವ ಕ್ರೀಡೆಗಳನ್ನು ಆಯೋಜಿಸುವುದು ಕೂಡ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರೊಟ್ಟಿಗೆ ಸಮಾಜದ ಆದಿದೇವತೆ ಲಕ್ಷ್ಮಮ್ಮ ದೇವಿಗೆ ವಿಶೇಷ ಪೂಜೆ, ಉತ್ಸವ ಮೂರ್ತಿ ಮೆರವಣಿಗೆ ಮೂರು ದಿನಗಳ ಕಾಲ ಹಳ್ಳಿ ಸೊಗಡಿನ ಸಾಹಸ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಲಿವೆ.