ಮಲೆನಾಡಿನ ಬೆಳೆಗಳಿಗೆ ಚೈತನ್ಯ ತುಂಬಿದ ಹಿಂಗಾರು

| Published : Nov 07 2023, 01:30 AM IST

ಸಾರಾಂಶ

ತಾಲೂಕಿನಾದ್ಯಂತ ಕಳೆದ ತಿಂಗಳ ಅಂತರದಲ್ಲಿ ಎರಡು ದಿನಗಳ ಕಾಲ ಸುರಿದ ಹಿಂಗಾರು ಮಳೆ ತಾಲೂಕಿನ ವಾಣಿಜ್ಯ ಬೆಳೆಗಳಿಗೆ ಹೊಸ ಚೈತನ್ಯ ನೀಡಿದೆ. ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಕಾಳು ಮೆಣಸು ಹಾಗೂ ಭತ್ತದ ಬೆಳೆಗಳಲ್ಲಿ ಅ.೩೦ ಹಾಗೂ ೩೧ ರಂದು ತಾಲೂಕಿನ ಹಲವೆಡೆ 1 ರಿಂದ 3 ಇಂಚುವರಗೆ ಉತ್ತಮ ಪ್ರಮಾಣದ ಹಿಂಗಾರು ಮಳೆ ಪರಿಣಾಮ ಹೊಸ ಚೇತನ ಉದ್ಭವಿಸಿದೆ

ಕಾಫಿ, ಮೆಣಸು, ಏಲಕ್ಕಿ ಬೆಳೆಗಳಿಗೆ ಅಮೃತ ಸಿಂಚನ । ಎರಡು ದಿನ 1-3 ಇಂಚು ಉತ್ತಮ ಮಳೆ । ರೈತರಲ್ಲಿ ನೆಮ್ಮದಿಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನಾದ್ಯಂತ ಕಳೆದ ತಿಂಗಳ ಅಂತರದಲ್ಲಿ ಎರಡು ದಿನಗಳ ಕಾಲ ಸುರಿದ ಹಿಂಗಾರು ಮಳೆ ತಾಲೂಕಿನ ವಾಣಿಜ್ಯ ಬೆಳೆಗಳಿಗೆ ಹೊಸ ಚೈತನ್ಯ ನೀಡಿದೆ.

ಜುಲೈ ತಿಂಗಳ ೧೬ ರಿಂದ ೨೪ರ ವರಗೆ ಒಂದು ವಾರದ ಮಳೆ ಹೊರತುಪಡಿಸಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆಯು ಸಹ ಸಕಾಲಕ್ಕೆ ಬಾರದ ಪರಿಣಾಮ ಬಹುತೇಕ ತಾಲೂಕಿನ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಕಾಳು ಮೆಣಸು ಹಾಗೂ ಭತ್ತದ ಬೆಳೆಗಳು ನೀರಿನ ಕೊರತೆ ಎದುರಿಸುತ್ತಿದ್ದವು. ಸದ್ಯ ಕಳೆದ ಅ.೩೦ ಹಾಗೂ ೩೧ ರಂದು ತಾಲೂಕಿನ ಹಲವೆಡೆ 1 ರಿಂದ 3 ಇಂಚುವರಗೆ ಉತ್ತಮ ಪ್ರಮಾಣದ ಹಿಂಗಾರು ಮಳೆಯಾಗಿದೆ. ಪರಿಣಾಮ ಬೆಳೆಗಳಲ್ಲಿ ಹೊಸ ಚೇತನ ಉದ್ಭವಿಸಿದೆ.

ಕಾಫಿ, ಮೆಣಸು:

ಮಳೆ ಎದುರು ನೋಡುತ್ತಿದ್ದ ಕಾಫಿ ಬೆಳೆಗಾರರಿಗೆ ಹಿಂಗಾರು ಮಳೆ ನೆಮ್ಮದಿ ನೀಡಿದ್ದು ತಾಲೂಕಿನಲ್ಲಿ ಪ್ರಸಕ್ತ ವರ್ಷ ೭೫ ಹೇಕ್ಟೇರ್‌ನಷ್ಟ ಹೊಸ ಕಾಫಿ ತೋಟಗಳ ನಿರ್ಮಾಣ ಮಾಡುತ್ತಿದ್ದರೆ, ಕಾಂಡಕೊರಕ ಸೇರಿದಂತೆ ವಿವಿಧ ರೋಗಗಳಿಂದ ತೆರವಾದ ಗಿಡಗಳಿಗೆ ಪರ್ಯಾಯವಾಗಿ ಹೊಸಗಿಡಗಳನ್ನು ನಾಟಿಮಾಡಲಾಗಿದ್ದು ಸದ್ಯ ಈ ಹೊಸಗಿಡಗಳಿಗೆ ನೀರಿನ ತೀರ ಅಗತ್ಯತೆ ಹೆಚ್ಚಿದ್ದು ಹೊಸಗಿಡಗಳ ಉಳಿವಿಗಾಗಿ ಈಗಿನಿಂದಲೇ ಹನಿ ನೀರಾವರಿ ವ್ಯವಸ್ಥೆಗೆ ಬೆಳೆಗಾರರು ಮುಂದಾಗಿದ್ದರು. ಸದ್ಯ ಹಿಂಗಾರು ಮಳೆ ಬೆಳೆಗಾರರ ಕೆಲಸಕ್ಕೆ ತಾತ್ಕಾಲಿಕ ವಿರಾಮ ನೀಡಿದೆ. ಅಲ್ಲದೆ ಮಳೆ ಕೊರತೆಯಿಂದ ಕೆಲವೆಡೆ ಕಾಫಿಕಾಯಿ ಓಟಿ (ಓವರ್ ಟನ್) ಸಮಸ್ಯೆ ಎದುರಿಸುತ್ತಿದ್ದು ಇಂತಹ ಸಮಸ್ಯೆಗೆ ಹಿಂಗಾರು ಮಳೆ ಪರಿಹಾರ ಒದಗಿಸಿದ್ದು ಮಳೆಯಿಂದಾಗಿ ಕಾಫಿಕಾಯಿಯಲ್ಲಿ ರಸ ತುಂಬುವುದರಿಂದ ಓಟಿ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ವೇಗವಾಗಿ ಕಾಫಿ ಹಣ್ಣಾಗಲು ಈ ಮಳೆ ಉತ್ತಮವಾಗಿದೆ ಎಂಬುದು ಬೆಳೆಗಾರರ ವಲಯದ ಮಾತು.

ಹಿಂಗಾರು ಮಳೆ ಎಲ್ಲ ಬೆಳಗಳಿಗಿಂತ ಕಾಳು ಮೆಣಸಿನಬಳ್ಳಿಗಳಿಗೆ ಅಮೃತ ಸಿಂಚನ ಮಾಡಿಸಿದಂತಾಗಿದ್ದು ತಾಯಿ ಬೇರು ಹೊಂದಿಲ್ಲದ ಮೆಣಸಿನ ಬಳ್ಳಿಗಳು ನೀರಿನ ಅಗತ್ಯತೆ ಹೆಚ್ಚಿದೆ. ಈ ಬಾರಿ ಅತ್ಯಲ್ಪ ಮಳೆಯಾಗಿದ್ದು ಮೆಣಸಿನ ಬಳ್ಳಿಗಳನ್ನು ಈ ಬಾರಿ ಉಳಿಸಿಕೊಳ್ಳುವುದು ಬೆಳಗಾರರಿಗೆ ಹೋರಾಟವಾಗಿದೆ. ಅತಿಸೂಕ್ಷ್ಮತೆ ಹೊಂದಿರುವ ಮೆಣಸಿನಬಳ್ಳಿಗಳಿಗೆ ನೀರಿನ ಕೊರತೆ ಎದುರಾದರೆ ಹಳದಿ ರೋಗ ಸೇರಿದಂತೆ ಹಲವು ರೋಗಗಳು ಅವರಿಸಿ ಬಳ್ಳಿಗಳು ಅತಿಬೇಗ ನಾಶವಾಗುವುದು ನಿಶ್ಚಿತ. ಅಲ್ಲದೆ ಮುಂದಿನ ಹಂಗಾಮಿನಲ್ಲಿ ಅಧಿಕ ಇಳುವರಿ ಪಡೆಯಲು ಬಳ್ಳಿಗಳಲ್ಲಿ ಅತಿ ಹೆಚ್ಚು ಚಿಗುರು ಮೂಡುವುದು ಅತ್ಯಗತ್ಯ. ಚಿಗುರು ಮೂಡಲು ಹಾಗೂ ಹೊಸದಾಗಿ ನಾಟಿ ಮಾಡಿದ ಬಳ್ಳಿಗಳಿಗೆ ಈ ಹಿಂಗಾರು ಮಳೆ ವರದಾನವಾಗಿದೆ. ಅಲ್ಲದೆ ಹೊಸದಾಗಿ ನಾಟಿ ಮಾಡಿರುವ ಏಲಕ್ಕಿ,ಕಾಳುಮೆಣಸು ಹಾಗೂ ಕಾಫಿಗಿಡಗಳಿಗೆ ರಸಗೊಬ್ಬರ ನೀಡುವುದು ವಾಡಿಕೆಯಾಗಿದ್ದು ಸದ್ಯ ಹಿಂಗಾರು ಮಳೆ ರಸಗೊಬ್ಬರ ಹಾಕಲು ಸಹಾಯಮಾಡಿದೆ.

ಏಲಕ್ಕಿ-ಭತ್ತ:

ಅಗಸ್ಟ್ ಹಾಗೂ ಸೇಪ್ಟಂಬರ್ ತಿಂಗಳಿನಲ್ಲಿ ಏಲಕ್ಕಿ ಗಿಡಗಳ ನಾಟಿ ಕಾರ್ಯ ಮಾಡಲಾಗಿದ್ದು ಸದ್ಯ ಹೊಸದಾಗಿ ನಾಟಿ ಮಾಡಿರುವ ಗಿಡಗಳಿಗೆ ಹಿಂಗಾರು ಮಳೆಯ ಅಗತ್ಯತೆ ಹೆಚ್ಚಿದ್ದು ಸದ್ಯ ಮಳೆಯ ಸಿಂಚನ ಏಲಕ್ಕಿ ಬೆಳೆಗೆ ಹೊಸ ಚೈತನ್ಯ ನೀಡಿದೆ.

ಭತ್ತ: ಉತ್ತರೆ ಮಳೆ ಬಂದರೆ ರೋಗಗಳು ಕತ್ತರಿಸಿ ಹೋಗಲಿವೆ ಎಂಬ ಗಾದೆ ಈ ಬಾರಿ ಉತ್ತರೆ ಮಳೆಯ ಹನಿಯು ಭೂಮಿಗೆ ಬೀಳದ ಕಾರಣ ಇದು ಸುಳ್ಳಾಗಿದ್ದು ಮುಂಗಾರು ಮಳೆಯ ಕೊರತೆಯ ಕಾರಣದಿಂದ ತಾಲೂಕಿನಲ್ಲಿ ವಿಳಂಬವಾಗಿ ನಾಟಿ ಮಾಡಿರುವ ಭತ್ತದ ಗದ್ದೆಗಳು ಬೆಂಕಿರೋಗ ಸೇರಿದಂತೆ ವಿವಿಧ ರೋಗಗಳ ಗೂಡಾಗಿದ್ದು ಸದ್ಯ ಎರಡು ದಿನಗಳ ಮಳೆ ರೋಗ ನಿವಾರಣೆ ಹಾಗೂ ತೆನೆ ಮೂಡಲು ಸಹಾಯಕವಾಗಿದೆ.

ತಗ್ಗಿದ ಉಷ್ಣಾಂಶ

ಮಳೆಕೊರತೆಯ ಕಾರಣ ತಾಲೂಕಿನಲ್ಲಿ ಉಷ್ಣಾಂಶ ಅಧಿಕವಾಗಿದ್ದು ನವೆಂಬರ್ ತಿಂಗಳ ಆರಂಭದಲ್ಲೆ ಏಪ್ರೀಲ್ ತಿಂಗಳು ನೆನಪಿಸುವಂತಹ ಬಿಸಿಲು ಧಗೆ ಅವರಿಸಿದ್ದು ಈಗಲೇ ಇಷ್ಟೊಂದು ಬಿಸಿಲು ಎಂಬ ಉದ್ಗಾರ ತಾಲೂಕಿನಲ್ಲಿ ಸಾಮಾನ್ಯವಾಗಿ ಕೇಳಿ ಬರುತಿತ್ತು. ಸದ್ಯ ಇಂತಹ ಮಾತಿಗೆ ಹಿಂಗಾರು ಮಳೆ ವಿರಾಮ ನೀಡಿದ್ದು ವಾತವಾರಣ ತಂಪು ತಂಪಾಗಿದೆ.

ಸಮಸ್ಯೆ

ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವಾರಣ ಇರುವ ಕಾರಣ ಈಗಾಗಲೇ ಕೊಯ್ಲು ನಡೆಸಲಾಗಿರುವ ಅರೇಬಿಕ್‌ ಕಾಫಿ ಹಣ್ಣುಗಳನ್ನು ಒಣಗಿಸುವ ಸಮಸ್ಯೆ ಸೃಷ್ಟಿಯಾಗಿದ್ದು ಮಳೆ ಬರಲಿ ಹಾಗೆಯೇ ಬಿಸಿಲು ಇರಲಿ ಎಂಬ ಪ್ರಾರ್ಥನೆ ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದೆ. ಕಳೆದ ಎರಡು ದಿನಗಳಲ್ಲಿ ಸುರಿದ ಹಿಂಗಾರು ಮಳೆ ಬೆಳೆಗಳಿಗೆ ಹೊಸಚೈತನ್ಯ ನೀಡಿದೆ. ಅಲ್ಲದೆ ಹನಿ ನೀರಾವರಿಗಾಗಿ ಮಾಡಬೇಕಿದ್ದ ಸಾಕಷ್ಟು ಮಾನವ ಶ್ರಮ ಹಾಗೂ ದನ ವ್ಯಯವನ್ನು ತಗ್ಗಿಸಿದೆ:

ಧರಣೇಂದ್ರ ಇಬ್ಬಡಿ., ಪ್ರಗತಿಪರ ಕಾಫಿಬೆಳೆಗಾರ.

ಹಿಂಗಾರು ಮಳೆ ಎಲ್ಲ ಬೆಳೆಗಳಿಗೂ ಅತ್ಯಗತ್ಯ. ಈ ಬಾರಿ ಮುಂಗಾರು ಮಳೆ ವೈಪಲ್ಯದಿಂದ ಕಳೆಗುಂದಿದ ಬೆಳೆಗಳಿಗೆ ಹಿಂಗಾರು ಮಳೆ ಅತ್ಯಗತ್ಯವಾಗಿತ್ತು.

ವಾಧಿರಾಜ್, ನಿವೃತ್ತ ವಿಜ್ಞಾನಿ, ಏಲಕ್ಕಿ ಮಂಡಳಿ.