ಸಾರಾಂಶ
ಪೂರ್ವ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಪ್ರಮುಖ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಹಾಗೆ ಪೂರ್ವ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಪ್ರಮುಖ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ, ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್ ಮಾಹಿತಿ ನೀಡಿದ್ದಾರೆ.ಅಡಕೆ ತೋಟಗಳಲ್ಲಿ ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣಾಂಶದಿಂದ ಕೆಲ ತೋಟಗಳಲ್ಲಿ ಗರಿಗಳು ಒಣಗಿರುವುದು ಮತ್ತು ಕೆಂಪು ನುಸಿಯ ಬಾಧೆ ಹೆಚ್ಚುವುದು ಕಂಡು ಬಂದಿದೆ. ಅತಂಹ ತೋಟಗಳಲ್ಲಿ ನಿಯಂತ್ರಣಕ್ಕೆ ಹೆಕ್ಸಿತೈಯೋಜಾಕ್ಸ್ 1.5 ಮಿ.ಲೀ. ಹಾಗೂ ಲಘು ಪೋಷಕಾಂಶಗಳ ಮಿಶ್ರಣ 5 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಎಲೆಯ ಕೆಳಭಾಗ ಸಿಂಪಡಿಸಲು ಸೂಚಿಸಿದೆ.
ದೊಡ್ಡ ಅಡಕೆ ತೋಟಗಳಲ್ಲಿ ಇಂಗಾರ ಕೊಳೆ ರೋಗ ಕಂಡು ಬಂದಿರುವುದರಿಂದ ಅದರ ನಿಯಂತ್ರಣಕ್ಕೆ ಒಣಗಿರುವ ಇಂಗಾರಗಳನ್ನು ಕಿತ್ತು ಸುಡಬೇಕು. ತದನಂತರ ಮುಂಜಾಗೃತವಾಗಿ ಪ್ರೋಪಿಕೊನೋಜೋಲ್ 1 ಮಿಲೀ, ತೈಯಾಮೆಥಾಕ್ಸಾನ್ 0.5 ಗ್ರಾಂ, ಲಘು ಪೋಷಕಾಂಶಗಳ ಮಿಶ್ರಣ 5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಎಲೆ ಮತ್ತು ಸುಳಿಗಳ ಮೇಲೆ ಸಿಂಪರಣೆಯನ್ನು ಮಾಡಬೇಕು.ಮುಂಗಾರು ಹಂಗಾಮಿನಲ್ಲಿ ಅಡಕೆ ತೋಟಗಳಿಗೆ ಪೋಷಕಾಂಶಗಳನ್ನು ನೀಡುವುದಕ್ಕೆ ಸೂಕ್ತ ಕಾಲವಾಗಿದೆ. ತೋಟಗಳನ್ನು ಸ್ವಚ್ಛಪಡಿಸಿ ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಜಿಪ್ಸಂ ಪ್ರತಿ ಎಕರೆಗೆ 3-4 ಕ್ವಿಂಟಾಲ್‌ನ್ನು ಎರಚಿ ಉಳುಮೆ ಮಾಡಬೇಕು.
ಪೋಷಕಾಂಶಗಳ ನಿರ್ವಹಣೆಗೆ 1-5 ವರ್ಷದ ಒಳಗಿನ ತೋಟಗಳಿಗೆ ಸಾವಯವ ಗೊಬ್ಬರ 5-6 ಕೆಜಿ ಪ್ರತೀ ಗಿಡಕ್ಕೆ ಹಾಗೂ 10 ವರ್ಷ ಮೇಲ್ಪಟ್ಟ ಗಿಡಗಳಿಗೆ ಸಾವಯವ ಗೊಬ್ಬರ 10 ಕೆಜಿ ಪ್ರತೀ ಗಿಡಕ್ಕೆ ಹಾಗೂ ಮಣ್ಣು ಪರೀಕ್ಷೆಯ ಆಧಾರದ ಮೇಲೆ 15:15:15-150 ಗ್ರಾಂ., ಪೊಟ್ಯಾಷ್-100 ಗ್ರಾಂ ಮತ್ತು ಲಘು ಪೋಷಕಾಂಶ ಮಿಶ್ರಣ (ಬೀಟಲ್ ಮಿಕ್ಸ್)-100 ಗ್ರಾಂ ಪ್ರತಿ ಗಿಡಕ್ಕೆ ಗಿಡದಿಂದ ಎರಡು ಅಡಿ ಅಂತರದಲ್ಲಿ ನೀಡಬೇಕು. ಮುಂಗಾರು ಪ್ರಾರಂಭವಾಗಿರುವುದರಿಂದ ಪೋಷಕಾಂಶಗಳನ್ನು ನೀಡಿದ ನಂತರ ಹಸಿರೆಲೆ ಗೊಬ್ಬರವಾಗಿ ಸೆಣಬು / ಡಯಾಂಚ (15 ಕೆಜಿ ಪ್ರತೀ ಎಕರೆಗೆ) ಅಥವಾ ವೆಲೆವೆಟ್ ಬೀನ್ಸ್ (4 ಕೆಜಿ ಪ್ರತಿ ಎಕರೆಗೆ) ಬೀಜಗಳನ್ನು ತೋಟಗಳಲ್ಲಿ ಬಳಸಿ ಹೂವಾಗುವುದಕ್ಕಿಂತ ಮುಂಚೆ ಭೂಮಿಯಲ್ಲಿ ಮಗುಚಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.ಹಾಗೆಯೇ ತೆಂಗು, ಸಾಮಾನ್ಯ ಬೇಸಾಯ ಕ್ರಮಗಳ ಬಗ್ಗೆ ತಿಳಿಯಲು ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.