ಸಾರಾಂಶ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನಲ್ಲಿ ಮುಂಗಾರು ಮುಂದುವರಿದಿದ್ದು, ಜೂ.1ರಿಂದ 6ರ ವರೆಗೂ ಶೇ.45ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 21 ಮಿ.ಮೀ. ಇದ್ದು, 30.5 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಈಗ 15,960 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.ತಾಲೂಕಿನಲ್ಲಿ 94,854 ಹೆಕ್ಟೇರ್ ಭೌಗೋಳಿಕ ಪ್ರದೇಶವಿದ್ದು, ಇದರಲ್ಲಿ 67,613 ಹೆಕ್ಟೇರ್ ಪ್ರದೇಶ ಸಾಗುವಳಿ ಭೂಮಿ ಇದೆ. ತಾಲೂಕಿನಲ್ಲಿ ಮುಂಗಾರು ಉತ್ತಮ ಮಳೆಯಾಗುತ್ತಿದ್ದು, ಹಿರೇಹಡಗಲಿ ಹೋಬಳಿಯಲ್ಲಿ ಶೇ.76ರಷ್ಟು ಮಳೆ ಬಿದ್ದರೆ, ಇತ್ತ ಹೂವಿನಹಡಗಲಿ ಹೋಬಳಿಯಲ್ಲಿ ಶೇ.24, ಇಟ್ಟಗಿ ಹೋಬಳಿಯಲ್ಲಿ ಶೇ.20ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಮೆಕ್ಕೆಜೋಳದತ್ತ ಮುಖ ಮಾಡಿದ ರೈತ:ಈ ಭಾಗದಲ್ಲಿ ರೈತರು ಅತಿಹೆಚ್ಚು ಮೆಕ್ಕೆಜೋಳ ಬೆಳೆಯುತ್ತಾರೆ. 40,075 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿಯಿದ್ದು, 14,090 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೈಬ್ರಿಡ್ ಜೋಳ 1,300 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಇದೆ, ಅದರಲ್ಲಿ 570 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ತೊಗರಿ 1,500 ಹೆಕ್ಟೇರ್ ಪ್ರದೇಶ ಗುರಿ ನಿಗದಿಯಾಗಿದ್ದು, ಅದರಲ್ಲಿ 840 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ.
7 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ:ತಾಲೂಕಿನ ಹೂವಿನಹಡಗಲಿ, ಹಿರೇಹಡಗಲಿ ಮತ್ತು ಇಟ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಮೂರು ರೈತ ಸಂಪರ್ಕ ಕೇಂದ್ರಗಳನ್ನು ಹೊರತುಪಡಿಸಿ, ರೈತರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಹೊಳಲು, ಹಿರೇಮಲ್ಲನಕೆರೆ ಮತ್ತು ಹೊಳಗುಂದಿ ಗ್ರಾಮಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ.
2000 ಕ್ವಿಂಟಲ್ ಮೆಕ್ಕೆಜೋಳ ಬೇಡಿಕೆ:ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಶ್ರಿತ ಪ್ರದೇಶ ಹೊಂದಿದೆ. ಇದರಿಂದ ರೈತರು ಮೆಕ್ಕೆಜೋಳ ಬಿತ್ತನೆಯತ್ತ ಮುಖ ಮಾಡಿದ್ದಾನೆ. ಇದರಿಂದ ಕೃಷಿ ಇಲಾಖೆಗೆ 2 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಬಿತ್ತನೆ ಬೀಜದ ಬೇಡಿಕೆಯಂತೆ, 1900 ಕ್ವಿಂಟಲ್ ಮಾರಾಟವಾಗಿದೆ. ಇನ್ನು 940 ಕ್ವಿಂಟಲ್ ಬೀಜ ದಾಸ್ತಾನು ಇದೆ. ಹೈಬ್ರಿಡ್ ಜೋಳಕ್ಕೆ 40 ಕ್ವಿಂಟಲ್ ಬೇಡಿಕೆ ಇದೆ. ಇದರಲ್ಲಿ 30 ಕ್ವಿಂಟಲ್ ಪೂರೈಕೆಯಾಗಿದ್ದು, 22 ಕ್ವಿಂಟಲ್ ಮಾರಾಟವಾಗಿ 8 ಕ್ವಿಂಟಲ್ ಬೀಜ ದಾಸ್ತಾನು ಇದೆ. ತೊಗರಿ 350 ಕ್ವಿಂಟಲ್ ಬೇಡಿಕೆಯಲ್ಲಿ 300 ಕ್ವಿಂಟಲ್ ಪೂರೈಕೆಯಾಗಿದೆ. ಇದರಲ್ಲಿ 210 ಕ್ವಿಂಟಲ್ ಬೀಜವನ್ನು ರೈತರು ಖರೀದಿ ಮಾಡಿದ್ದು, 90 ಕ್ವಿಂಟಲ್ ದಾಸ್ತಾನು ಇದೆ. ಉಳಿದಂತೆ 3 ಕ್ವಿಂಟಲ್ ಸಜ್ಜೆ, 35 ಕ್ವಿಂಟಲ್ ಬತ್ತ, 8 ಕ್ವಿಂಟಲ್ ಸೂರ್ಯಕಾಂತಿ, 10 ಕ್ವಿಂಟಲ್ ಸೋಯಾಬಿನ್ ಬೀಜ ಸೇರಿದಂತೆ ಒಟ್ಟು 1,074 ಕ್ವಿಂಟಲ್ ದಾಸ್ತಾನು ಇದೆ.
ರಸಗೊಬ್ಬರ ಕೊರತೆ ಇಲ್ಲ:ಬಿತ್ತನೆ ಸಂದರ್ಭದಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಎಲ್ಲ ರೀತಿಯ ರಸಗೊಬ್ಬರ ದಾಸ್ತಾನು ಇದೆ. 1,690 ಟನ್ ಡಿಎಪಿ ಬೇಡಿಕೆಯಲ್ಲಿ 1,260 ಟನ್ ಮಾರಾಟವಾಗಿದ್ದು, 150 ಟನ್ ಡಿಎಪಿ ದಾಸ್ತಾನು ಇದೆ. 2,708 ಟನ್ ಯೂರಿಯಾ, 2,719 ಟನ್ ಕಾಂಪ್ಲೆಕ್ಸ್ ರಸಗೊಬ್ಬರ ದಾಸ್ತಾನು ಇದೆ.
ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗಿಲ್ಲ. 7 ಕೇಂದ್ರಗಳಲ್ಲಿ ಬೀಜ ವಿತರಣೆಯಾಗುತ್ತಿದೆ. ಈ ಬಾರಿ ಮಳೆ ಉತ್ತಮವಾಗಿದೆ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಹೂವಿನಹಡಗಲಿ ಮುಹಮ್ಮದ್ ಅಶ್ರಫ್.ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ಇಲಾಖೆ ಹೊಳಲು ಗ್ರಾಮದಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರ ತೆರೆದಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಇಲ್ಲದಿದ್ದರೆ ಹಿರೇಹಡಗಲಿ ರೈತ ಸಂಪರ್ಕ ಕೇಂದ್ರಕ್ಕೆ ಹೋಗಬೇಕಿತ್ತು ಎನ್ನುತ್ತಾರೆ ಮೈಲಾರ ರೈತ ಪುಟ್ಟಪ್ಪ ತಂಬೂರಿ.