ಸ್ಮಾರಕಗಳು ಪರಂಪರೆಯ ಪ್ರತೀಕ: ಸಾಹಿತಿ ಲಿಂಗರೆಡ್ಡಿ ಆಲೂರು

| Published : May 09 2025, 12:35 AM IST

ಸಾರಾಂಶ

ಭಾರತ ಭವ್ಯ ಇತಿಹಾಸ ಮತ್ತು ಪರಂಪರೆಯ ನಾಡಾಗಿದೆ. ಇಲ್ಲಿ ಅನೇಕ ರಾಜ್ಯ, ಸಾಮ್ರಾಜ್ಯಗಳು ಉದಯಿಸಿ ಆಡಳಿತ ನಡೆಸಿ ಆಯಾ ರಾಜ್ಯಗಳ ರಾಜಕೀಯ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿದಿವೆ.

ಗಂಗಾವತಿ:

ನಗರದ ಕೆಎಸ್‌ಸಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದ ನಾಲ್ಕನೇ ದಿನದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಲಿಂಗರೆಡ್ಡಿ ಆಲೂರು, ಭಾರತ ಭವ್ಯ ಇತಿಹಾಸ ಮತ್ತು ಪರಂಪರೆಯ ನಾಡಾಗಿದೆ. ಇಲ್ಲಿ ಅನೇಕ ರಾಜ್ಯ, ಸಾಮ್ರಾಜ್ಯಗಳು ಉದಯಿಸಿ ಆಡಳಿತ ನಡೆಸಿ ಆಯಾ ರಾಜ್ಯಗಳ ರಾಜಕೀಯ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿದಿವೆ ಎಂದರು.

ಅನೇಕ ರಾಜ-ಮಹಾರಾಜರು ಸಾವಿರಾರು ಕೋಟೆ-ಕೊತ್ತಲ, ದೇವಾಲಯ, ಬಸದಿ, ಸ್ತೂಪ, ಮಂದಿರ-ಮಸೀದಿ, ಬಾವಿ, ಪುಷ್ಕರಣಿ, ಕೆರೆ-ಕಟ್ಟೆ ಮುಂತಾದ ಸ್ಮಾರಕಗಳನ್ನು ನಿರ್ಮಿಸಿ ಹೋಗಿದ್ದಾರೆ. ಹಾಗಾಗಿ ಭಾರತದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಸ್ಮಾರಕಗಳು ಕಂಡುಬರುತ್ತವೆ. ಇವುಗಳು ಕೇವಲ ಭೌತಿಕ ಕಟ್ಟಡಗಳಲ್ಲ, ಅವು ನಮ್ಮ ಇತಿಹಾಸ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಸಹಯೋಗದೊಂದಿಗೆ ಹೊರತಂದ ಸ್ಮಾರಕಗಳ ಸಂರಕ್ಷಣೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್, ವಿದ್ಯಾರ್ಥಿನಿಯರು ತಮ್ಮ ಗ್ರಾಮದಲ್ಲಿರುವ ಶಾಸನ, ಶಿಲ್ಪ ಮೂರ್ತಿ, ದೇವಾಲಯ, ಕೋಟೆ ಪ್ರಾಚೀನ ನಾಣ್ಯ ಮುಂತಾದವುಗಳ ದಾಖಲೆಯನ್ನು ಮಾಡಿ ಸಣ್ಣ ಸಣ್ಣ ಲೇಖನ ಬರೆಯಲು ಕರೆ ನೀಡಿದರು.

ಉಪನ್ಯಾಸಕಿ ಡಾ. ಶಾರದಾ ಪಾಟೀಲ್, ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದ ಸ್ವರೂಪ ಚಟುವಟಿಕೆಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಾಣಿಶ್ರೀ ಪಾಟೀಲ್, ಡಾ. ಸುರೇಶಗೌಡ ಮತ್ತು ಮಹಾವಿದ್ಯಾಲಯದ ಸಿಬ್ಬಂದಿ, ಎನ್ಎಸ್ಎಸ್. ಸ್ವಯಂಸೇವಕಿಯರು ಉಪಸ್ಥಿತರಿದ್ದರು.