ಕೋರಮಂಗಲದಲ್ಲಿ ನೂತನ ಶ್ರೀ ರಾಮಾಂಜನೇಯ ದೇವಾಲಯ ಲೋಕಾರ್ಪಣೆ

| Published : May 09 2025, 12:35 AM IST

ಸಾರಾಂಶ

ವಿಶ್ವ ಒಕ್ಕಲಿಗರ ಮಹೋತ್ಸವ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕುಣಿಗಲ್ ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾದಮಾರನಹಳ್ಳಿ ಕಾಳಿ ಮಠದ ವಿಜಯಶಕ್ತಿ ಗುರೂಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಚಕ್ರಬಾವಿ ಜಂಗಮ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ನೂತನ ಶ್ರೀ ರಾಮಾಂಜನೇಯ ದೇವಾಲಯ ಅದ್ಧೂರಿಯಾಗಿ ವಿವಿಧ ಮಠದ ಶ್ರೀಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ಲೋಕಾರ್ಪಣೆ ಅಂಗವಾಗಿ ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಆಗ್ರೋಧಕ ಸಮೇತ ಗೋಪೂಜೆ, ಗ್ರಾಮಪ್ರದಕ್ಷಿಣೆ, ಪ್ರವೇಶ ಬಲಿ, ಆಲದ ಪ್ರವೇಶ, ಧ್ವಜಾರೋಹಣ ನೆರವೇರಿಸಲಾಯಿತು.

ಗುರುವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣಪತಿ ಪೂಜೆ, ದೇವನಂದಿ, ಪಂಚಗವ್ಯಸಾಧನ, ರಕ್ಷಾ ಬಂಧನ, ಕಳಶಾರಾಧನೆ, ಅಗ್ನಿಸ್ಥಾಪನಾ ಪೂರ್ವಕ ಮಹಾಗಣಪತಿ ಸಮೇತ ವಾಸ್ತು ಹೋಮ, ಸಂಜೆ ಗೋಧೂಳಿ ಲಗ್ನದಲ್ಲಿ ನವಗ್ರಹ, ಮೃತ್ಯುಂಜಯ, ಸಪ್ತಸಭಾ, ದಶಾದಿಕ್ಪಾಲಕರ ಸಮೇತ ಶ್ರೀರಾಮ ತಾರಕ ಹೋಮ, ಪ್ರಧಾನ ಹೋಮ, ರಕ್ಷೋ ಬಲಿಹರಣ, ವಸ್ತು ಬಲಿ, ಪ್ರಾಣ ಪ್ರತಿಷ್ಠಾಪನೆ, ಶ್ರೀಗಳ ಸಮ್ಮುಖದಲ್ಲಿ ಪ್ರಧಾನ ಗೋಪುರ ಕಳಶ ಸ್ಥಾಪನೆ, ಮಹಾಪೂರ್ಣಾಹುತಿ, ಕದಳಿ ವೃಕ್ಷ ಛೇದನ, ಕುಷ್ಮಾಂಡಬಲಿಹರಣ, ಸ್ವಾಮಿಗೆ ಅಷ್ಟೋತ್ತರ, ಸಾಮೂಹಿಕ ಪ್ರಾರ್ಥನೆ ಪೂಜಾದಿಗಳು ಸಂತೋಷ್ ಆರಾಧ್ಯ ಹಾಗೂ ಸಂಗಡಗರಿಂದ ನೆರವೇರಿದವು.

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಡಾ.ನಂಜಾವದೂತ ಸ್ವಾಮೀಜಿ ಮಾತನಾಡಿ, ರಾಮ ಎಷ್ಟೇ ಕ್ಲಿಷ್ಟಕರ ಸಂದರ್ಭದಲ್ಲಿ ಕೂಡ ತನ್ನ ಆದರ್ಶವನ್ನು ಮರೆಯದೆ ನಡೆದುಕೊಂಡ ವ್ಯಕ್ತಿ. ಶ್ರೀರಾಮನ ಆರಾಧನೆ ಇಡೀ ದೇಶದಲ್ಲೇ ನಡೆಯುತ್ತಿದ್ದು, 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿ ರಾಮನ ಆರಾಧನೆ ಮಾಡುತ್ತಿದ್ದು, ಕೋರಮಂಗಲ ಗ್ರಾಮದಲ್ಲಿ ಅಮೃತ ಶಿಲೆಯಲ್ಲಿ ರಾಮನ ಕೆತ್ತನೆ ಮಾಡಿಸಿದ್ದು. ಸುಂದರವಾಗಿ ಮೂಡಿಬಂದಿದೆ. ಶ್ರೀ ರಾಮಾಂಜನೇಯರು ಎಲ್ಲರಿಗೂ ಒಳಿತು ಮಾಡಲಿ, ಈ ನೆಲವೇ ಸಂಸ್ಕೃತಿಯಿಂದ ಗಟ್ಟಿಯಾಗಿದ್ದು, ದೇವರ ಆರಾಧನೆ ನಿರಂತರವಾಗಿರಲಿ ಎಂದು ಹಾರೈಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪಿಸಿ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ನಾನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯತಾಭಾವ ತಿಳಿಸುತ್ತೇನೆ. ಅಂತಹದ್ದೇ ದೇವಾಲಯವನ್ನು ಇಲ್ಲಿ ನಿರ್ಮಾಣ ಮಾಡುವ ಮೂಲಕ ಶ್ರೀ ರಾಮನ ಕೃಪೆಗೆ ಪಾತ್ರರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ವಿಜ್ಞಾನ- ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಆಧ್ಯಾತ್ಮಿಕತೆ ಮುಂದುವರಿಸಬೇಕೆಂದು ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ಗ್ರಾಮಸ್ಥರು ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಶ್ರೀ ಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರ ಕವಣಾಪುರದ ಬಸವಣ್ಣ ಸ್ವಾಮಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಖಿಲ್ ಅವರು ಆಗಮಿಸುತ್ತಿದ್ದಂತೆ ಮಂಗಳವಾದ್ಯದೊಂದಿಗೆ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್, ಮಂಜುನಾಥ್ ಮಾತನಾಡಿದರು.

ವಿಶ್ವ ಒಕ್ಕಲಿಗರ ಮಹೋತ್ಸವ ಮಠದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಕುಣಿಗಲ್ ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಾದಮಾರನಹಳ್ಳಿ ಕಾಳಿ ಮಠದ ವಿಜಯಶಕ್ತಿ ಗುರೂಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಚಕ್ರಬಾವಿ ಜಂಗಮ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ. ಜಯರಾಂ, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಎಪಿಎಂಸಿ ಮಾಜಿ ಜಿಲ್ಲಾಧ್ಯಕ್ಷ ಚಕ್ರಬಾವಿ ಮಾರೇಗೌಡ, ಜೆಡಿಎಸ್ ಹಿರಿಯ ಮುಖಂಡ ತಮ್ಮಣ್ಣ ಗೌಡ, ಪೊಲೀಸ್ ನವೀನ್, ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಖಜಾಂಚಿ ಜಯರಾಮಯ್ಯ, ಕಾರ್ಯದರ್ಶಿ ನಾರಾಯಣ್ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.