ಸಾರಾಂಶ
ಗಡಿ ಭದ್ರತಾ ಪಡೆಯಲ್ಲಿ ಆರು ತಿಂಗಳ ಕರ್ತವ್ಯ ನಿರ್ವಹಿಸಿ ಒಂದು ತಿಂಗಳ ರಜೆಯಲ್ಲಿ ಊರಿಗೆ ಮರಳಿರುವ ಮೂಡುಬಿದಿರೆ ತಾಲೂಕಿನ ಮಾರೂರು ಗ್ರಾಮದ ಸಂದೀಪ್ ಶೆಟ್ಟಿ ಅವರನ್ನು ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಕುಟುಂಬಸ್ಥರು ಇತ್ತೀಚೆಗೆ ಗ್ಗೆ ಮೂಡುಬಿದಿರೆಯ ಬಸ್ ನಿಲ್ದಾಣದ ಆವರಣದಲ್ಲಿ ರಾಷ್ಟ್ರಧ್ವಜ ನೀಡಿ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಗಡಿ ಭದ್ರತಾ ಪಡೆಯಲ್ಲಿ ಆರು ತಿಂಗಳ ಕರ್ತವ್ಯ ನಿರ್ವಹಿಸಿ ಒಂದು ತಿಂಗಳ ರಜೆಯಲ್ಲಿ ಊರಿಗೆ ಮರಳಿರುವ ಮೂಡುಬಿದಿರೆ ತಾಲೂಕಿನ ಮಾರೂರು ಗ್ರಾಮದ ಸಂದೀಪ್ ಶೆಟ್ಟಿ ಅವರನ್ನು ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಕುಟುಂಬಸ್ಥರು ಭಾನುವಾರ ಬೆಳಗ್ಗೆ ಮೂಡುಬಿದಿರೆಯ ಬಸ್ ನಿಲ್ದಾಣದ ಆವರಣದಲ್ಲಿ ರಾಷ್ಟ್ರಧ್ವಜ ನೀಡಿ ಸ್ವಾಗತಿಸಿದರು.ಬಳಿಕ ಅವರು ಮಾತನಾಡಿ, ಸತತ ಪರಿಶ್ರಮ ಮತ್ತು ಪ್ರಯತ್ನ ದೊಂದಿಗೆ, ನಮ್ಮೂರಿನ ಯುವಕನೊಬ್ಬ ಬಿಎಸ್ಎಫ್ ನಲ್ಲಿ ಒಂದು ವರ್ಷದ ತರಬೇತಿ ಪಡೆದು ಆರು ತಿಂಗಳ ಕರ್ತವ್ಯವನ್ನು ಮುಗಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ದೈವ ದೇವರ ಅನುಗ್ರಹದಿಂದಾಗಿ ದೇಶ ಕಾಯುವ ಸೈನಿಕನಾಗಿದ್ದು, ಮುಂದಿನ ದಿನಗಳಲ್ಲಿ ಸೈನ್ಯದಲ್ಲಿ ಉನ್ನತವಾದ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಯೋಧ ಸಂದೀಪ್ ಶೆಟ್ಟಿ ಮಾರೂರು ಮಾತನಾಡಿ, ಭಾರತದ ಸೈನಿಕನಾಗುವ ಹಾದಿ ಸುಲಭವಾಗಿಲ್ಲ. ನಮ್ಮ ತುಳುನಾಡಿನ ದೈವ ದೇವರ ಅನುಗ್ರಹ ಮತ್ತು ಹೆತ್ತವರ ಪ್ರೋತ್ಸಾಹ ಹಾಗೂ ಊರವರ ಸಹಕಾರದಿಂದ ಅದು ಸಾಧ್ಯವಾಗಿದೆ. ತಾನು ಒಬ್ಬನೇ ಮಗನಾಗಿದ್ದರೂ ಕೂಡಾ ಹೆತ್ತವರು ನನ್ನನ್ನು ಸೇನೆಗೆ ಸೇರಿಸಿ ಭಾರತ ಮಾತೆಯ ಸೇವೆ ಮಾಡಲು ಅವಕಾಶ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಯೋಧ ಸಂದೀಪ್ ಶೆಟ್ಟಿ ಹೆತ್ತವರಾದ ರತಿ ರಾಜು ಶೆಟ್ಟಿ, ಬಾವಂದಿರಾದ ನಾಗರಾಜ್ ಶೆಟ್ಟಿ ಅಂಬೂರಿ, ಸತೀಶ್ ಶೆಟ್ಟಿ, ಪುರಸಭೆಯ ಮಾಜಿ ಸದಸ್ಯ ದಿನೇಶ್ ಪೂಜಾರಿ, ಊರಿನ ಗಣ್ಯರಾದ ಶಂಭು ಶೆಟ್ಟಿ, ಸುನೀಲ್ ಶೆಟ್ಟಿ, ಶಂಕರ್ ಮಾರೂರು, ಯಶೋದರ್ ಕುಲಾಲ್, ಹಿರಿಯರು ಉಪಸ್ಥಿತರಿದ್ದರು. ಯೋಧನನ್ನು ಮೂಡುಬಿದಿರೆಯಿಂದ ಮಾರೂರಿಗೆ ತೆರೆದ ಜೀಪಿನಲ್ಲಿ ಕರೆದುಕೊಂಡು ಹೋಗಲಾಯಿತು.