ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾ.ಹೆ. 169 ಎ ಇದರ ಅಗಲೀಕರಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಇದರ ಮಲ್ಪೆಯಿಂದ ಕರಾವಳಿ ಬೈಪಾಸ್‌ವರೆಗಿನ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಭೂ ಮಾಲೀಕರಿಗೆ ಪರಿಹಾರ ಧನವನ್ನು ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾ.ಹೆ. 169 ಎ ಇದರ ಅಗಲೀಕರಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ 169 ಎ ಇದರ ಮಲ್ಪೆ - ತೀರ್ಥಹಳ್ಳಿವರೆಗಿನ ಕಾಮಗಾರಿ ಜಿಲ್ಲೆಯಲ್ಲಿ ಅಂತಿಮ ಹಂತದಲ್ಲಿದೆ. ಆದರೆ ಕಾಮಗಾರಿ ನಡೆಯುತ್ತಿರುವ ಕೆಲವು ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆಗದ ಕಾರಣ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಭೂ ಸ್ವಾಧೀನ ಕಾರ್ಯಗಳನ್ನು ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಪೂರ್ಣಗೊಳಿಸಬೇಕು. ಪದೇಪದೇ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದರು.
ನೆನೆಗುದಿಗೆ ಬಿದ್ದಿರುವ ಪರ್ಕಳ ಭಾಗದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 8.25 ಕೋಟಿ ರು. ಅನ್ನು ಕೋರ್ಟಿಗೆ ಜಮಾ ಮಾಡಲಾಗಿದೆ. ಇಲ್ಲಿನ ರಾಹೆಯಲ್ಲಿ 419 ಮೀ. ವ್ಯಾಪ್ತಿಯಲ್ಲಿ ಭೂಮಿ ಕಳೆದುಕೊಳ್ಳುವ 13 ಜನರಲ್ಲಿ ಒಬ್ಬರು ಕೋರ್ಟಿಗೆ ಹೋಗಿದ್ದು, ಈ ಬಗ್ಗೆ ಮರುಸರ್ವೆ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದರು.ಹಿರಿಯಡ್ಕದಿಂದ ಪೆರ್ಡೂರುವರೆಗೆ ಬಾಕಿ ಇದ್ದ 2.69 ಕಿಮೀ ಭೂಮಿ ಸ್ವಾಧೀನವಾಗಿದೆ. ಹೆಬ್ರಿ ಪಾಡಿಗಾರ ಪ್ರದೇಶದಲ್ಲಿ 1.4 ಕಿ.ಮೀ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಮರ ಕಡಿಯಲು ಅನುಮತಿ ನೀಡಿದ್ದಾರೆ. ಆದರೆ ಮರ ತೆರವು ಕಾರ್ಯವನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ದೂರವಾಣಿ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಬ್ರಿಯಿಂದ ಆಗುಂಬೆ ಘಾಟಿವರೆಗೆ ಕಾಮಗಾರಿಗೆ 72 ಕೋಟಿ ರು. ಬಿಡುಗಡೆಯಾಗಿದೆ. ಹೆಬ್ರಿ ಬಳಿಕ ಆಗುಂಬೆವರೆಗೆ ಕಾಮಗಾರಿಗೆ ಡಿ.ಪಿ.ಆರ್.ನ್ನು ತ್ವರಿತವಾಗಿ ತಯಾರಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಭೂ ಸ್ವಾಧೀನ ಆದ ಭೂಮಾಲೀಕರಿಗೆ ನೋಟಿಸ್ ನೀಡಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ. ವಿನಾಕಾರಣ ಕಾಮಗಾರಿಯಲ್ಲಿ ವಿಳಂಬ ತೋರಿಸಬಾರದು ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರಾ. ಹೆದ್ದಾರಿಯಲ್ಲಿ ಜಾಗ ಕಳೆದುಕೊಂಡಿರುವ ಮತ್ತು ಪರಿಹಾರ ಧನ ಪಾವತಿಸಲು ಬಾಕಿ ಇರುವವರ ಪಟ್ಟಿ ತಯಾರಿಸಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ತಿಳಿಸಿದರು.ಕಾರ್ಕಳ ಶಾಸಕ ಸುನಿಲ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಶೃಂಗೇರಿ- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರರು ಹಾಗೂ ಮತ್ತಿತರರು ಇದ್ದರು.