ಕುಮಾರೇಶ್ವರ ಮಠದ ದಾಸೋಹ, ಜಾತ್ರೆಗೆ ಮೂಜಗು ಹಣ ನೀಡಿಲ್ಲ

| Published : Mar 24 2024, 01:37 AM IST

ಸಾರಾಂಶ

ಹಾನಗಲ್ಲ ಶ್ರೀ ಕುಮಾರೇಶ್ವರ ವಿರಕ್ತಮಠದ ವಾರ್ಷಿಕ ದಾಸೋಹ ಹಾಗೂ ಜಾತ್ರಾ ಮಹೋತ್ಸವಕ್ಕಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಯಾವುದೇ ಹಣ ನೀಡಿಲ್ಲ, ಭಕ್ತರ ದಾನದಿಂದಲೇ ಇದೆಲ್ಲವನ್ನೂ ನಡೆಸಲಾಗುತ್ತಿದೆ ಎಂದು ಸಮಿತಿಗಳ ಸದಸ್ಯರು ಸ್ಪಷ್ಟಪಡಿಸಿದರು.

ಹಾನಗಲ್ಲ: ಹಾನಗಲ್ಲ ಶ್ರೀ ಕುಮಾರೇಶ್ವರ ವಿರಕ್ತಮಠದ ವಾರ್ಷಿಕ ದಾಸೋಹ ಹಾಗೂ ಜಾತ್ರಾ ಮಹೋತ್ಸವಕ್ಕಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಯಾವುದೇ ಹಣ ನೀಡಿಲ್ಲ, ಭಕ್ತರ ದಾನದಿಂದಲೇ ಇದೆಲ್ಲವನ್ನೂ ನಡೆಸಲಾಗುತ್ತಿದೆ ಎಂದು ಸಮಿತಿಗಳ ಸದಸ್ಯರು ಸ್ಪಷ್ಟಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಸೋಹ ಸಮಿತಿಯ ಕಾರ್ಯದರ್ಶಿ ಬಿ.ಜಿ. ಪಾಟೀಲ, ಈರಣ್ಣ ಹುಗ್ಗಿ ಹಾಗೂ ಜಾತ್ರಾ ದಾಸೋಹ ಸಮಿತಿಯ ಅಧ್ಯಕ್ಷ ದಾನಪ್ಪ ಸಿಂಧೂರ, ವಾರ್ಷಿಕ ಪ್ರತಿ ತಿಂಗಳ ಅಮಾವಾಸ್ಯೆಯ ದಾಸೋಹಕ್ಕಾಗಿ ₹೧೪ ಲಕ್ಷಗಳನ್ನು ದಾನಿಗಳಿಂದ ಪಡೆದು ಡಿಪಾಸಿಟ್ ಇಡಲಾಗಿದೆ. ಅದರಲ್ಲಿ ದಾಸೋಹ ನಡೆಯುತ್ತಿದೆ. ಇದಕ್ಕಾಗಿ ಈ ಮಠದ ಶ್ರೀಗಳು ಯಾವುದೇ ಹಣ ನೀಡುತ್ತಿಲ್ಲ. ೨೦ ವರ್ಷಗಳಿಂದ ನಾವೇ ಈ ಕಾರ್ಯ ಮಾಡುತ್ತಿದ್ದೇವೆ. ಪ್ರತಿ ವರ್ಷ ನಡೆಯುವ ಶ್ರೀ ಕುಮಾರೇಶ್ವರ ಮಹಾಸ್ವಾಮಿಗಳ ಸ್ಮರಣೋತ್ಸವಕ್ಕೆ ಭಕ್ತರು ದಾನ ನೀಡಿದ್ದರಲ್ಲಿಯೇ ಜಾತ್ರೆ ಮಾಡುತ್ತೇವೆ. ಅಲ್ಲದೆ ಹಲವಾರು ವರ್ಷಗಳಲ್ಲಿ ಉತ್ಸವ ಮಾಡಿ ಉಳಿದ ಹಣವನ್ನು ಕೂಡಿಟ್ಟು ಮುಂದಿನ ಜಾತ್ರೆಗೆ ವಿನಿಯೋಗಿಸುತ್ತೇವೆ. ಯಾವುದೇ ರೀತಿಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಜಾತ್ರೆಗೆ ದಾಸೋಹಕ್ಕೆ ಹಣ ನೀಡುವುದಿಲ್ಲ. ಅವರು ಜಾತ್ರೆಗೆ ಹಣ ಖರ್ಚು ಮಾಡಿದ್ದೇನೆ ಎಂಬ ಹೇಳಿಕೆ ಒಪ್ಪುವಂತಹದ್ದಲ್ಲ. ಮಠದ ಆಸ್ತಿ ಮೇಲೆ ಸಾಲ ಮಾಡಿರುವುದನ್ನು ತಮಗೆ ತಿಳಿದಂತೆ ಖರ್ಚಿನ ಬಾಬ್ತು ತೋರಿಸುವ ಕೆಲಸ ಬೇಡ ಎಂದರು.

ನಾನೇ ಸೋಲ್ ಟ್ರಸ್ಟಿ ಎನ್ನುವ ಶ್ರೀಗಳು ಮಠದ ಹಿತಕ್ಕೆ ಶ್ರಮಿಸಲಿ. ಇಡೀ ವರ್ಷ ಎರಡು ಕಲ್ಯಾಣ ಮಂಟಪಗಳ ಬಾಡಿಗೆ, ಮಠದ ಮಾವಿನ ಕೊಪ್ಪಲದ ಹಣ ಏನಾಯಿತು? ಗದ್ದುಗೆಯನ್ನೇ ಒತ್ತೆ ಇಡುವ ಪರಿಸ್ಥಿತಿ ಮಠಕ್ಕಿದೆಯೇ? ಶ್ರೀಗಳೇ ಸೋಲ್ ಟ್ರಸ್ಟಿ ಆದರೂ ಮಠದ ಹಿತಕ್ಕಾಗಿ ಏನು ಮಾಡಿರುವಿರಿ? ಭಕ್ತರು ಖರ್ಚು ಮಾಡಿದ್ದನ್ನು ನಾನೇ ಮಾಡಿದ್ದೇನೆ ಎಂಬುದು ಎಷ್ಟರ ಮಟ್ಟಿಗೆ ಸತ್ಯ. ಇದರ ಸತ್ಯಾನ್ವೇಷಣೆ ಆಗಬೇಕು ಎಂದರು.

ಜಾತ್ರಾ ಸಮಿತಿಯ ಕಾರ್ಯದರ್ಶಿ ಎಸ್.ಎಂ. ಕೋತಂಬರಿ ಮಾತನಾಡಿ, ಹಾನಗಲ್ಲಿನ ಕುಮಾರೇಶ್ವರ ಸೊಸೈಟಿಗೆ ಕೊಟ್ಟ ಭೂಮಿಯ ಬಗ್ಗೆ ಶ್ರೀಗಳು ಸ್ಪಷ್ಟನೆ ನೀಡಬೇಕು. ಕಾನೂನು ಬಾಹಿರವಾಗಿ ಆಸ್ತಿ ಮಾರಾಟ ಮಾಡುವ ಸ್ಥಿತಿ ಮಠಕ್ಕಿಲ್ಲ. ಮಠದ ಆಸ್ತಿ ಉಳಿಯಬೇಕು. ಮಠದಲ್ಲಿ ಧಾರ್ಮಿಕ ವಾತಾವರಣ ಉಳಿಯಲು ಮುಂದಾಗಬೇಕು. ಮಠದ ಭಕ್ತರು ಮಠದ ಆಸ್ತಿ ಬರೆಸಿಕೊಳ್ಳುವಂತಾಗಬಾರದು. ನಮ್ಮದು ಸ್ವಾಮಿಗಳ ವಿರುದ್ಧ ಹೋರಾಟವಲ್ಲ. ಮಠ ಉಳಿಸುವ ಹೋರಾಟ ಎಂದರು.

ಮಠಾಧೀಶರನ್ನು ನೇಮಿಸಬೇಕು: ಶ್ರೀ ಮಠದ ಭಕ್ತರಾದ ರವೀಂದ್ರ ಚಿಕ್ಕೇರಿ ಮಾತನಾಡಿ, ಹಾನಗಲ್ಲ ಮಠಕ್ಕೆ ಮಠಾಧೀಶರನ್ನು ನೇಮಿಸಬೇಕು. ಇಲ್ಲಿ ಮಠಾಧೀಶರು ಇಲ್ಲದ್ದರಿಂದಲೇ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ೨೫ ವರ್ಷಗಳಿಂದ ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠಕ್ಕೆ ಮಠಾಧೀಶರನ್ನು ನೇಮಿಸಬೇಕು ಎಂಬ ಒತ್ತಾಸೆ ಇದೆ. ಇಲ್ಲಿನ ಶ್ರೀಗಳು ಮೂರುಸಾವಿರಮಠದ ಜಗದ್ಗುರುಗಳಾದ ಬಳಿಕ ಮಠದಲ್ಲಿ ಧಾರ್ಮಿಕ ಚಟುವಟಿಕೆ ಕುಂಠಿತವಾಗಿವೆ. ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಹಾನಗಲ್ಲ ಮಠಕ್ಕೆ ಮಠಾಧೀಶರನ್ನು ನೇಮಿಸುವುದೇ ಪರಿಹಾರ ಎಂದು ಒತ್ತಾಯಿಸಿದರು.

ಶ್ರೀಗಳು ಹಾನಗಲ್ಲಿಗೆ ಬಂದು ಭಕ್ತರ ಸಭೆ ಕರೆದು ಸತ್ಯ ಸಂಗತಿಗಳನ್ನು ಹೇಳಬೇಕು. ಹಾನಗಲ್ಲ ಮಠದಲ್ಲಿ ಪ್ರತಿ ತಿಂಗಳಿನ ಅರ್ಧದಷ್ಟು ದಿನಗಳಾದರೂ ಇಲ್ಲಿರಬೇಕು. ಇಲ್ಲವೆ ಮಠಕ್ಕೆ ಮಠಾಧೀಶರನ್ನು ನೇಮಿಸಬೇಕು. ಮಠದ ಒಟ್ಟು ಆಸ್ತಿಯ ಲೆಕ್ಕ ನೀಡಬೇಕು. ಹುಬ್ಬಳ್ಳಿಯಲ್ಲಿ ಕುಳಿತು ಸುದ್ದಿ ಹೇಳುವ ಬದಲು ಹಾನಗಲ್ಲಿಗೆ ಬಂದು ಸಮಸ್ಯೆಗಳನ್ನು ಬಗೆಹರಿಸಬೇಕು. ನಾವು ಶ್ರೀಗಳ ವಿರೋಧಿಗಳಲ್ಲ. ಹಾನಗಲ್ಲ ಮಠ ಉಳಿಯಬೇಕಷ್ಟೇ ಎಂದು ಒಕ್ಕೊರಲಿನಿಂದ ಕೂಡಿದ ಭಕ್ತರು ತಿಳಿಸಿದರು.

ಶ್ರೀಮಠದ ಭಕ್ತರಾದ ಪ್ರಶಾಂತ ಮುಚ್ಚಂಡಿ, ಚನ್ನವೀರಸ್ವಾಮಿ ಹಿರೇಮಠ, ಸಿದ್ದಲಿಂಗಪ್ಪ ಕಮಡೊಳ್ಳಿ, ಮಹೇಶ ಕಬ್ಬೂರ, ಉಮೇಶ ಕಬ್ಬೂರ, ಶಂಕರಗೌಡ ಪಾಟೀಲ, ಜಗದೀಶ ಸಿಂಧೂರ, ಜಗದೀಶ ಕೊಂಡೋಜಿ, ವೀರೇಶ ಹೆಬ್ಬಳ್ಳಿ, ಜಯಲಿಂಗಪ್ಪ ಹಳಕೊಪ್ಪದ, ಶಿವಲಿಂಗಯ್ಯ ಪೂಜಾರ, ಮೌನೇಶ ಮೆಳ್ಳಾಗಟ್ಟಿ, ಪರಸಪ್ಪ ಬ್ಯಾಲಾಳ, ಪುನಿತ್ ನೆಲೋಗಲ್, ಬಸಣ್ಣ ಆಲದಕಟ್ಟಿ, ಶಂಭಣ್ಣ ಚಿಕ್ಕೇರಿ, ಶಂಭುಗೌಡ್ರು ಪಾಟೀಲ, ನಾಗರಾಜ ಹಿರೇಗೌಡ್ರು ಮೊದಲಾದವರಿದ್ದರು.