ಸರ್ಕಾರಿ ಶಾಲೆಯಲ್ಲೇ ಮೊರಾರ್ಜಿ ಕೋಚಿಂಗ್‌

| Published : Sep 05 2025, 01:00 AM IST

ಸರ್ಕಾರಿ ಶಾಲೆಯಲ್ಲೇ ಮೊರಾರ್ಜಿ ಕೋಚಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಶಾಲೆಯ ಸಹಶಿಕ್ಷಕಿ ಜ್ಯೋತಿ ಸುರಳೇಶ್ವರ ಅವರ ಆಸಕ್ತಿ, ಕ್ರಿಯಾಶೀಲತೆಯೇ ಇದಕ್ಕೆ ಕಾರಣ. ಇದರಿಂದ ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.

ಹಾವೇರಿ: ದಾನಿಗಳ ನೆರವಿನಿಂದ ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್‌ ಕ್ಲಾಸ್‌ ಮೂಲಕ ನಾವಿನ್ಯತಾ ಬೋಧನಾ ಪದ್ಧತಿ ಅಳವಡಿಸಿಕೊಂಡು ಮಕ್ಕಳಿಗೆ ಕಲಿಕೆ ಜತೆಗೆ ವಿಶೇಷವಾಗಿ 5ನೇ ತರಗತಿ ಮಕ್ಕಳಿಗೆ ಮೊರಾರ್ಜಿ ಶಾಲೆ ಪ್ರವೇಶಕ್ಕೆ ತರಬೇತಿ ನೀಡುವ ಮೂಲಕ ಹಾನಗಲ್ಲ ತಾಲೂಕಿನ ಹಳ್ಳಿಬೈಲ್‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆಯುತ್ತಿದೆ.

ಈ ಶಾಲೆಯ ಸಹಶಿಕ್ಷಕಿ ಜ್ಯೋತಿ ಸುರಳೇಶ್ವರ ಅವರ ಆಸಕ್ತಿ, ಕ್ರಿಯಾಶೀಲತೆಯೇ ಇದಕ್ಕೆ ಕಾರಣ. ಇದರಿಂದ ಈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯ ಜನರೇ ಹೆಚ್ಚಾಗಿರುವ ಹಳ್ಳಿಬೈಲ್‌ ಗ್ರಾಮದ ಸರ್ಕಾರಿ ಶಾಲೆ ಯಾವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಕಡಿಮೆಯಿಲ್ಲದಂತೆ ಗಮನ ಸೆಳೆಯುತ್ತಿದೆ. ಸ್ಥಳೀಯ ಗ್ರಾಪಂ, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರ ನೆರವಿನಲ್ಲಿ ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್, ಸಿಂಹ ಧ್ವಜ ಸ್ತಂಬ, ಪ್ರಿಂಟರ್, ಲ್ಯಾಪ್‌ಟಾಪ್, ನಲಿಕಲಿ ತರಗತಿಗೆ ಬೇಕಾದ ಕಲಿಕಾ ಸಾಮಗ್ರಿ, ಡಿಜಿಟಲ್ ಬೋರ್ಡ್, ವಿಜ್ಞಾನ ಪ್ರಯೋಗಾಲಯಕ್ಕೆ ಬೇಕಾದ ಸಲಕರಣೆಗಳು, ಸ್ಪೀಕರ್, ಸರಸ್ವತಿ ದ್ವಾರ ಬಾಗಿಲು, ಅಂಬೇಡ್ಕರ್ ಮೂರ್ತಿ, ಗಾಂಧೀಜಿ ಮೂರ್ತಿ, ದೇಶದ ಮಹನೀಯರ ವಾಲ್‌ ಫ್ರೇಮ್ ಹೀಗೆ ಶಾಲೆಯನ್ನು ಅಭಿವೃದ್ದಿಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಕಂಗೊಳಿಸುವ ಉದ್ಯಾನ ನಿರ್ಮಿಸಲಾಗಿದೆ. 40ಕ್ಕಿಂತ ಕಡಿಮೆಯಿದ್ದ ಮಕ್ಕಳ ಸಂಖ್ಯೆ ಈ ಸಲ 70ಕ್ಕೆ ಏರಿದೆ.

ವಿಶೇಷವಾಗಿ 5ನೇ ತರಗತಿ ಮಕ್ಕಳಿಗೆ ಮೊರಾರ್ಜಿ ಶಾಲೆ ಪ್ರವೇಶಕ್ಕೆ ಅನುಕೂಲವಾಗುವಂತೆ ಕೋಚಿಂಗ್‌ ನೀಡಲಾಗುತ್ತಿದೆ. ಪ್ರತಿವರ್ಷ ಈ ಶಾಲೆಯ 10ಕ್ಕೂ ಹೆಚ್ಚು ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿರುವುದು ವಿಶೇಷವಾಗಿದೆ. ಇದೇ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇರಿ ಕಳೆದ 18 ವರ್ಷಗಳಿಂದ ಜ್ಯೋತಿ ಸುರಳೇಶ್ವರ ಅವರು ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತ, ಶಾಲೆಯ ಅಭಿವೃದ್ಧಿ ಮಾಡುತ್ತ ಗೌರವಕ್ಕೆ ಪಾತ್ರರಾಗಿದ್ದಾರೆ.