ಮೊರಾರ್ಜಿ ವಸತಿ ಶಾಲೆ ಅತಿಥಿ ಶಿಕ್ಷಕ ಸೇವೆಯಿಂದ ವಜಾ

| Published : Sep 18 2024, 01:54 AM IST

ಸಾರಾಂಶ

Morarji Residential School Guest Teacher dismissed from service

- ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಶಿಕ್ಷಕರು, ವಾರ್ಡನ್‌ನಿಂದ ಅಸಭ್ಯ ವರ್ತನೆ ಪ್ರಕರಣಪ್ರಮುಖಾಂಶಗಳು:-

- ಎಫ್‌ಐಆರ್‌ ದಾಖಲಿಸುವಲ್ಲಿ ಹಿಂದೇಟು: ನೋಟೀಸ್‌ ನೀಡಿದ್ದೇವೆಂದು ಅಧಿಕಾರಿಗಳ ಹಾರಿಕೆ ಉತ್ತರ

- ಅಧಿಕಾರಿಗಳೆದುರು ಅಲ್ಲಾದ ಘಟನೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಕ್ಕಳು

- ದೌರ್ಜನ್ಯ ಬಗ್ಗೆ ಬಾಯಿ ಬಿಟ್ಟರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್‌ ಮಾಡಿಸುವ ಬೆದರಿಕೆ ಹಾಕುತ್ತಿದ್ದ ಶಿಕ್ಷಕರು, ವಾರ್ಡನ್‌?

-ಅಧಿಕಾರಿಗಳೆದುರು ಕಿರುಕುಳ ತಿಳಿಸದಂತೆ ಮಕ್ಕಳಿಗೆ ಬೆದರಿಕೆ?

------ಕನ್ನಡಪ್ರಭ ವಾರ್ತೆ ಗುರುಮಠಕಲ್

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೆಣ್ಣು ಮಕ್ಕಳ ಜೊತೆ ಅಸಭರ್ವಾಗಿ ವರ್ತಿಸಿದ ಆರೋಪದಡಿ ಶಿಕ್ಷಕ ಶಾಂತಪ್ಪ ಹಾಗೂ ವಾರ್ಡನ್‌ ಮಿರಾನ್‌ ಅಲಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದ್ದು, ಮತ್ತೋರ್ವ ಅತಿಥಿ ಶಿಕ್ಷಕ ಅಂಬರೀಶನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಈ ಪ್ರಕರಣದ ಕುರಿತು ಮಂಗಳವಾರ ಕನ್ನಡಪ್ರಭ ಪತ್ರಿಕೆಯಲ್ಲಿ ‘ಬಾಲಕಿಯರೊಂದಿಗೆ ಶಿಕ್ಷಕರ ಅನುಚಿತ ವರ್ತನೆ’ ಶಿರ್ಷೀಕೆಯಡಿ ಸುದ್ದಿ ಪ್ರಕಟವಾಗಿತ್ತು. ಆದರೆ, ಈ ಕುರಿತು ಠಾಣೆಯಲ್ಲಿ ದೂರು ದಾಖಲಿಸುವಲ್ಲಿ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ನಡೆ ಶಂಕೆ ಮೂಡಿಸಿದೆ. ಜಿಲ್ಲಾಧಿಕಾರಿಗಳು ಬಂದಾಗ ‘ಇಲ್ಲಿ ಅಂತಹ ಗಂಭೀರವೇನೂ ಆಗಿಲ್ಲ, ಕೇವಲ ಡಬ್ಬಲ್‌ ಮೀನಿಂಗ್‌ನಲ್ಲಿ ಮಾತ್ರ ಈ ಮೂವರು ಮಾತನಾಡುತ್ತಿದ್ದರು’ ಎಂದು ಪ್ರತಿಕ್ರಿಯಿಸಬೇಕು ಎಂದು ಮಕ್ಕಳಿಗೆ ಒತ್ತಡ ಹೇರಲಾಗುತ್ತಿದೆ ಎನ್ನುವ ಮಾತುಗಳಿವೆ.

ದೂರಿನ ಹಿನ್ನೆಲೆ ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳ ತಂಡದೆದುರು ಗೋಳು ತೋಡಿಕೊಂಡಿದ್ದರು. ಮಾಧ್ಯಮಗಳಲ್ಲಿ ಇದು ಸಾಕಷ್ಟು ವರದಿಯಾಗಿ, ಪದೇ ಪದೇ ಇಂತಹ ಘಟನೆಗಳು ಜರುಗುತ್ತಿರುವುದಿಂದ, ಯಾದಗಿರಿ ಜಿಲ್ಲೆ ವಸತಿ ಶಾಲೆಯ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು ಅರಿಯಲು ಹೋದ ಅಧಿಕಾರಿಗಳೆದುರು ಮಕ್ಕಳು ಅಲ್ಲಾದ ಘಟನೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪಾಠ ಮಾಡುವ ನೆಪದಲ್ಲಿ ವಾರ್ಡನ್‌ ಸೇರಿ ಮೂವರೂ ತಮ್ಮ ಜೊತೆ ಅಸಭ್ಯದಿಂದ ವರ್ತಿಸುತ್ತಿದ್ದರು. ಇದು ಬಹಿರಂಗಪಡಿಸಿದರೆ ಆಂತರಿಕ ಅಂಕಗಳ ಕಡಿತಗೊಳಿಸಲಾಗುವುದು ಎಂದು ಬೆದರಿಸುತ್ತಿದ್ದರು.

ಗುಂಜನೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕರು ಮತ್ತು ವಾರ್ಡನ್ ವಿರುದ್ಧ ಅನುಚಿತ ವರ್ತನೆ ಬಗ್ಗೆ ಸೋಮವಾರ ಬಾಲಕಿಯರು ದೂರಿದ್ದಾರೆ. ವಿದ್ಯಾರ್ಥಿಗಳ ದೂರಿನನ್ವಯ, ಜಿಲ್ಲಾ ವಸತಿ ನಿಲಯ ಮೇಲಾಧಿಕಾರಿಗಳು ಖುದ್ದಾಗಿ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ, ಮೂವರು ಶಿಕ್ಷಕರು ಮೈ, ಕೈ ಮುಟ್ಟುವುದು, ವಿದ್ಯಾರ್ಥಿನಿಯರೊಂದಿಗೆ ಅಸಹ್ಯ ಭಾಷೆಯಲ್ಲಿ ಮಾತನಾಡುವುದು, ತಡರಾತ್ರಿವರೆಗೂ ವಿದ್ಯಾರ್ಥಿನಿಯರೊಟ್ಟಿಗೆ ಕಾಲ ಕಳೆಯೋ ವಾರ್ಡನ್, ತಾನು ತಿಂದಿರುವ ತಿನಿಸನ್ನು ತನ್ನ ಬಾಯಿಂದ ತೆಗೆದು ವಿದ್ಯಾರ್ಥಿನಿಯರ ಬಾಯಿಗಿಡುವುದರ ಕುರಿತು ಮಕ್ಕಳು ಅಳಲು ತೋಡಿಕೊಂಡಿದ್ದಾರೆ. ಈ ದೌರ್ಜನ್ಯ ಬಗ್ಗೆ ಎಲ್ಲಿಯಾದರೂ ತಿಳಿಸಿದರೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ, ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ಕಡಿಮೆ ನೀಡುವುದಾಗಿ ಬೆದರಿಸುತ್ತಿದ್ದರು. ಇದರಿಂದ ಭಯಗೊಂಡು ಕೆಲವು ವಿದ್ಯಾರ್ಥಿನಿಯರು ಮೌನವಾಗಿಯೇ ಕಿರುಕುಳ ಅನುಭವಿಸುತ್ತಿದ್ದರು ಎಂದು ದೂರಿದ್ದರು.

ಸೋಮವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ. ಸರೋಜಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರೇಮಕುಮಾರ, ಜಿಲ್ಲಾ ವಸತಿ ಶಿಕ್ಷಣ ಸಂಸ್ಥೆಗಳ ಸಮನ್ವಯಾಧಿಕಾರಿ ಸುರೇಶ್ ತಡಿಬಿಡಿ, ಗುರುಮಠಕಲ್‌ ಪೊಲೀಸ್‌ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ದೇವೀಂದ್ರಪ್ಪ ಡಿ. ಧೂಳಖೇಡ ಹಾಗೂ ಮತ್ತಿತರ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ನೋವು ಆಲಿಸಿದ್ದಾರೆ.

‘ಅಸಭ್ಯ ವರ್ತನೆಯ ಘಟನೆಗೆ ಸಂಬಂಧಿಸಿದಂತೆ ಶಾಲೆಯ ವಾರ್ಡನ್‌ ಮೀರಾನ್‌ ಅಲಿ ಮತ್ತು ಸಮಾಜ ವಿಜ್ಞಾನ ಶಿಕ್ಷಕ ಶಾಂತಪ್ಪ ಅವರಿಗೆ ನೋಟಿಸ್‌ ನೀಡಿದ್ದೇನೆ. ಅತಿಥಿ ಶಿಕ್ಷಕ ಅಂಬರೀಶ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದೇನೆ.’ ಎಂದು ಪ್ರಾಂಶುಪಾಲ ಅಕ್ಬರ್‌ ಅಲೀ ಪತ್ತಾರ್‌ ‘ಕನ್ನಡಪ್ರಭ’ ಕ್ಕೆ ತಿಳಿಸಿದ್ದಾರೆ.

ಆದರೆ, ಅಧಿಕಾರಿಗಳು ವಿದ್ಯಾರ್ಥಿನಿಯರ ವಾಸ್ತವ ಹೇಳಿಕೆಗಳನ್ನು ದಾಖಲಿಸಿದೆ. ಪ್ರಕರಣ ಮುಚ್ಚಿ ಹಾಕಲು ನೋಟಿಸ್‌ ನೀಡಿ, ಎಫ್‌ಐಆರ್ ದಾಖಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ದಿಕ್ಕು ತಪ್ಪಿಸಲು ವಿದ್ಯಾರ್ಥಿನಿಯರಿಗೆ ಒತ್ತಡ ಹೇಳಿ ದ್ವಂದ್ವ ಹೇಳಿಕೆ ಹೇಳಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಹಿಂದೆಯೂ ಕೂಡ, ಇದೇ ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ದೂರಿನನ್ವಯ, ಮುಖ್ಯಗುರು ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಪ್ರಕರಣದ ದಾಖಲಿಸದಂತೆ ಪಾಲಕರ ಮನೆಗಳಿಗೆ ತೆರಳಿ ಬೆದರಿಕೆ ಹಾಕಲಾಗಿತ್ತು ಎಂಬುದಾಗಿ ಮಕ್ಕಳು ವಿಚಾರಣೆ ವೇಳೆ ದೂರಿದ್ದರು. ಇಂತಹ ಕೆಲವು ಪ್ರಕರಣಗಳಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ಬಿಟ್ಟಿದ್ದ ಪಾಲಕರು, ದುಡಿಯಲು ಮಹಾನಗರಗಳಿಗೆ ಗುಳೇ ಕಳುಹಿಸಿದ್ದರು.