ಸಾರಾಂಶ
ಆನಂದಪುರ: ರೈತರು ತೋಟಗಾರಿಕೆ ಬೆಳೆಗಳ ಸಸ್ಯೋತ್ಪಾದನೆ ಮತ್ತು ಮಾರಾಟದಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಆನಂದಪುರ: ರೈತರು ತೋಟಗಾರಿಕೆ ಬೆಳೆಗಳ ಸಸ್ಯೋತ್ಪಾದನೆ ಮತ್ತು ಮಾರಾಟದಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಆಯೋಜಿಸಲಾಗಿದ್ದ ತೋಟಗಾರಿಕಾ ಬೆಳೆಗಳ ನರ್ಸರಿ ನಿರ್ವಹಣೆ ಕುರಿತು ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ನಡೆದ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳ ಸಸ್ಯೋತ್ಪಾದನೆ ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯ. ವಿವಿಧ ರೀತಿಯ ತೋಟಗಾರಿಕಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಂಡಾಗ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯ ಎಂದರು.ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಕೆ.ಆರ್.ಗುರುಮೂರ್ತಿ ಮಾತನಾಡಿ, ರೈತರ ಬೆಳೆಯಲ್ಲಿ ಬರುವಂತಹ ಸಮಸ್ಯೆಗಳಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಕಾಲೇಜು ಹಾಗೂ ಸಂಶೋಧನಾ ಕೇಂದ್ರಗಳಿಗೆ ರೈತರು ಭೇಟಿ ನೀಡಿ. ವಿಜ್ಞಾನಿಗಳ ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.ಪರಿಶಿಷ್ಟ ಜಾತಿ ಪಂಗಡದ ನಿರ್ದೇಶಕ ಡಾ.ಎಂ.ರವಿಕುಮಾರ್ ಮಾತನಾಡಿ, ರೈತರು ವಿಶ್ವವಿದ್ಯಾನಿಲಯದಲ್ಲಿ ಸಿಗುವಂತಹ ಮಾಹಿತಿಯನ್ನು ಪಡೆದುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.ಕುಲಸಚಿವ ಡಾ.ಸಿ.ಶಶಿಧರ್ ಮಾತನಾಡಿ, ವಿಶ್ವವಿದ್ಯಾಲಯ ರೈತರಿಗೆ ಬೇಕಾಗುವ ಜ್ಞಾನವನ್ನು ಹಂಚುವ ಕೆಲಸ ಮಾಡುತ್ತಿದೆ. ರೈತರು ತಮ್ಮ ಬೆಳೆಯ ಉತ್ಪಾದನೆ ಹೆಚ್ಚಿಸಿಕೊಳ್ಳಲು ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅನುಸರಿಸ ಬೇಕಾಗುವಂತಹ ಎಲ್ಲಾ ಮಾಹಿತಿಯನ್ನು ಕೊಡಲು ವಿಶ್ವವಿದ್ಯಾಲಯ ಸದಾ ಸಿದ್ಧವಿದೆ. ಎಲ್ಲಾ ರೈತರು ವಿಶ್ವವಿದ್ಯಾನಿಲಯದ ವಿಜ್ಞಾನಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳವ ಅವಶ್ಯಕತೆ ಇದೆ ಎಂದರು. ಡಾ.ಎಸ್.ಪ್ರದೀಪ್, ಡಾ.ಅಶೋಕ್ ಸೇರಿದಂತೆ ಅನೇಕ ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.