ಸಾರಾಂಶ
ಮೊರಾರ್ಜಿ ವಸತಿ ಶಾಲೆಯಲ್ಲಿ ಕೂಡ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿ ಇನ್ನೂ 2 ಮೊರಾರ್ಜಿ ವಸತಿ ಶಾಲೆಗಳನ್ನು ಕ್ಷೇತ್ರಕ್ಕೆ ನೀಡುವಂತೆ ಮನವಿ ಮಾಡಿದ್ದೇನೆ. ಅವರು ನನ್ನ ಮನವಿಗೆ ಸ್ಪಂದಿಸಿದ್ದು, ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಹಿಟ್ನಾಳ ತಿಳಿಸಿದ್ದಾರೆ.
ಕೊಪ್ಪಳ:
ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಸೇರಿದಂತೆ ಹೆಚ್ಚು ವಸತಿ ಶಾಲೆಗಳನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ತರಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.ತಾಲೂಕಿನ ಅಳವಂಡಿ ಗ್ರಾಮದಲ್ಲಿ ₹ 22 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಕಟ್ಟಡ ನಿರ್ಮಾಣ, ₹ 42 ಲಕ್ಷ ವೆಚ್ಚದಲ್ಲಿ ನೂತನ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣದ ಕಾಮಗಾರಿ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಕೊಪ್ಪಳ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಲಾಗಿದೆ. ಅನೇಕ ವಸತಿ ಶಾಲೆಗಳನ್ನು ಕ್ಷೇತ್ರಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ಅಂಬೇಡ್ಕರ್ ವಸತಿ ಶಾಲೆಗಳು ಮಂಜೂರಾತಿ ಆಗುವ ಹಂತದಲ್ಲಿವೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಕೂಡ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಇನ್ನೂ 2 ಮೊರಾರ್ಜಿ ವಸತಿ ಶಾಲೆಗಳನ್ನು ಕ್ಷೇತ್ರಕ್ಕೆ ನೀಡುವಂತೆ ಮನವಿ ಮಾಡಿದ್ದೇನೆ. ಅವರು ನನ್ನ ಮನವಿಗೆ ಸ್ಪಂದಿಸಿದ್ದು, ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದರು.ಶೀಘ್ರ ಅಡಿಗಲ್ಲು:
ಸಿಂಗಟಾಲೂರು ನೀರಾವರಿ ಯೋಜನೆಯಡಿ ಕೊಪ್ಪಳ ತಾಲೂಕಿಗೆ ಒಳಪಡುವ ಪ್ರದೇಶದ ಕಾಮಗಾರಿಗೆ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಲಿದ್ದಾರೆ. ನೀರಾವರಿ ಯೋಜನೆ ಜಾರಿ ಮಾಡಿ ಈ ಭಾಗದ ರೈತರ ಬಹುದಿನಗಳ ಕನಸನ್ನು ನನಸು ಮಾಡುತ್ತೇವೆ. ಈ ಭಾಗದ ರೈತರು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ವಿಂಡ್ ಪವರ್ ಹಾಗೂ ಸೋಲಾರ್ ಪವರ್ ಕಂಪನಿಗಳಿಗೆ ನೀಡಬಾರದು ಎಂದು ಮನವಿ ಮಾಡಿದರು.ರಸ್ತೆ ನಿರ್ಮಾಣ:
ಕೊಪ್ಪಳ ಮತಕ್ಷೇತ್ರದ ವದಗನಾಳ ಗ್ರಾಮದಿಂದ ಹಂದ್ರಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ (1.75 ಕಿಮೀ) ಅಂದಾಜು ಮೊತ್ತ ₹84 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. ಕೊಪ್ಪಳ ಮತಕ್ಷೇತ್ರದ ಬೆಟಗೇರಿ ಗ್ರಾಮದಲ್ಲಿ ₹2.50 ಕೋಟಿ ವೆಚ್ಚದಲ್ಲಿ ಕರ್ನಾಟಕ ಕಸ್ತೂರ್ಬಾ ಗಾಂಧಿ ಬಾಲಿಕಾ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.ಈ ವೇಳೆ ಮರುಳರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ಸಂಗಣ್ಣ ಕರಡಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಪ್ರಸನ್ನ ಗಡಾದ, ಭರಮಪ್ಪ ನಗರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ ಮುನಿರಾಬಾದ್, ಗಾಳೆಪ್ಪ ಪೂಜಾರ, ಹನುಮೇಶ ಹೊಸಳ್ಳಿ, ಭೀಮಣ್ಣ ಬೋಚನಹಳ್ಳಿ, ದೇವಪ್ಪ ಹಳ್ಳಿ, ಗುರು ಬಸವರಾಜ್ ಹಳ್ಳಿಕೇರಿ, ಅನ್ವರ್ ಗಡಾದ, ಚೌಡಪ್ಪ ಜಂತಲಿ, ಸುರೇಶ ದಾಸರೆಡ್ಡಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒ ದುಂಡೇಶ್ ತುರಾದಿ, ನಗರಸಭೆ ಸದಸ್ಯ ಅಕ್ಬರ್ ಪಲ್ಟಾನ್ ಉಪಸ್ಥಿತರಿದ್ದರು.