ಹೋಟೆಲ್‌ ಆಹಾರ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

| Published : Mar 18 2025, 12:31 AM IST

ಹೋಟೆಲ್‌ ಆಹಾರ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿ ಸಾವು ಹಾಗೂ ಅಸ್ವಸ್ಥ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಹೋಟೆಲ್ ಬಂದ್ ಮಾಡಿಸಲಾಗಿದ್ದು, ಹೋಟೇಲ್‌ನಲ್ಲಿ ಊಟ ಸೇವಿಸಿದ್ದ ಸುಮಾರು ೧೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿ ಸಾವು ಹಾಗೂ ಅಸ್ವಸ್ಥ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಹೋಟೆಲ್ ಬಂದ್ ಮಾಡಿಸಲಾಗಿದ್ದು, ಹೋಟೇಲ್‌ನಲ್ಲಿ ಊಟ ಸೇವಿಸಿದ್ದ ಸುಮಾರು ೧೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹೋಟೆಲ್‌ (ಸಿದ್ದಪ್ಪಾಜಿ ಹೋಟೆಲ್)ನಲ್ಲಿ ಶುಕ್ರವಾರ ಹೋಳಿ ಹಬ್ಬದ ಆಚರಣೆಗಾಗಿ ೧೫೦ ಮಂದಿಗೆ ಊಟ ತಯಾರು ಮಾಡಲು ಬುಕ್ ಮಾಡಲಾಗಿತ್ತು. ಹೊಟೇಲ್‌ನಲ್ಲಿ ತಯಾರು ಮಾಡಿದ್ದ ಬಾತ್‌ನ್ನು ಉದ್ಯಮಿ ಪುಷ್ಪೇಂದ್ರ ಕುಮಾರ್ ಹಾಗೂ ಅವರ ಸಂಬಂಧಿಕರು ಸೇರಿದಂತೆ ಸುಮಾರು ೬೧ ಮಂದಿ ಊಟ ಮಾಡಿದ್ದರು. ಅವರೂ ಕೂಡ ಅಸ್ವಸ್ಥಗೊಂಡು ಮೈಸೂರು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಊಟ ಖರೀದಿಸಿದ ೩೦ಕ್ಕೂ ಅಧಿಕ ಮಂದಿ ಸಹ ಅಸ್ವಸ್ಥಗೊಂಡಿರುವ ಬಗ್ಗೆ ಪೋಲಿಸರಿಂದ ಮಾಹಿತಿ ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಅಸ್ವಸ್ಥಗೊಂಡಿದ್ದ ಗೋಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಲ್ಲಿ ೫ ಮಂದಿ ತೀವ್ರ ನಿಗಾಘಟಕದಲ್ಲಿ ಹಾಗೂ ೪೧ ಮಂದಿ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ಸಿಪಿಐಗಳಾದ ಬಿ.ಜಿ.ಮಹೇಶ್, ಎಂ.ರವಿಕುಮಾರ್ ತಂಡ ರಚನೆ ಮಾಡಲಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಳವಳ್ಳಿಗೆ ಭೇಟಿ ನೀಡಿ ಹೋಟೇಲ್ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಶೀಲನೆ ನಡೆಸಿದರು.

ಹೊಟೇಲ್ ಸಮೀಪ ಗದ್ದೆ ಬಳಿ ಬಿಸಾಡಿದ್ದ ಸ್ಪಲ್ಪ ಪ್ರಮಾಣದ ಊಟವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯರಿಂದ ಪೊಲೀಸ್ ವರಿಷ್ಠಾಧಿಕಾರಿಗಳು ಸಮಗ್ರವಾಗಿ ಮಾಹಿತಿ ಕಲೆಹಾಕಿದ್ದಾರೆ. ತನಿಖಾ ತಂಡ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ, ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈಗಾಗಲೇ ಮೃತ ವಿದ್ಯಾರ್ಥಿ ಶವಪರೀಕ್ಷೆಯ ವರದಿ ಪೊಲೀಸರ ಕೈಸೇರಿದೆ ಎನ್ನಲಾಗಿದೆ. ಆದರೆ, ಎಸ್‌ಎಫ್‌ಎಲ್ ವರದಿಯು ೩-೪ ದಿನಗಳಲ್ಲಿ ಬರಲಿದೆ ಎಂದು ವೈದ್ಯ ಮೂಲಗಳಿಂದ ಮಾಹಿತಿ ಬಂದಿದೆ.

----------------------------------

ಮಳವಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹೋಟೆಲ್‌ನಿಂದ ತರಿಸಿದ್ದ ಬಾತ್‌, ಮೊಸರುಬಜ್ಜಿ, ಚಟ್ನಿ ಈ ಮೂರು ಪದಾರ್ಥಗಳಲ್ಲಿ ಯಾವುದರಲ್ಲಿ ವಿಷಕಾರಿ ಅಂಶವಿತ್ತು ಎನ್ನುವುದು ಪತ್ತೆಯಾಗಬೇಕಿದೆ. ಸದ್ಯ ಆ ಹೋಟೆಲ್‌ನ್ನು ಬಂದ್‌ ಮಾಡಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿರುವ ಐವರು ವಿದ್ಯಾರ್ಥಿಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ವಸತಿ ಶಾಲೆಯಲ್ಲಿ 24 ವಿದ್ಯಾರ್ಥಿಗಳು ಮೇಘಾಲಯದವರಾಗಿದ್ದು, ಉಳಿದ ವಿದ್ಯಾರ್ಥಿಗಳು ಕರ್ನಾಟಕದ ಬೇರೆ ಬೇರೆ ಜಿಲ್ಲೆಯವರಾಗಿದ್ದಾರೆ. ಮೇಘಾಲಯದ ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ನಿಯಮಾನುಸಾರ ನಡೆಯಲಿದೆ.

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್‌ ಅಧೀಕ್ಷಕರು